ಮಲ್ಪೆಯಲ್ಲಿ ಸೋಲಾರ್ ಮೂಲಕ ಒಣಮೀನು ತಯಾರಿಯ ಯೋಜನೆ- ಮಟ್ಟಾರ್ ರತ್ನಾಕರ ಹೆಗ್ಡೆ

ಮಂಗಳೂರು ಅ.31: ಸೋಲಾರ್ ಮೂಲಕ ಒಣಮೀನು ತಯಾರಿಯ ಯೋಜನೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಉತ್ಸುಕವಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಈ ಯೋಜನೆ ಮಾಡುವ ನಿರ್ಧಾರ ತೆಗೆದು ಕೊಳ್ಳಲಾಗಿದೆ. ಸೋಲಾರ್ ಮೂಲಕ ಒಣಮೀನು ತಯಾರಿಯಿಂದ ಒಣಮೀನಿನ ಗುಣಮಟ್ಟದ ಜೊತೆಗೆ ಬೇಡಿಕೆ ಹೆಚ್ಚಾಗಲಿದೆ. ಈ ಯೋಜನೆಗಾಗಿ ಮಲ್ಪೆಯಲ್ಲಿ 20 ಸೆಂಟ್ಸ್ ಜಾಗದಲ್ಲಿ ಅಂದಾಜು 2 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಕಾರ್ಯಕ್ರಮದಡಿಯಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಮಾಡುವ ಪ್ರಸ್ತಾವನೆಯಿದೆ. ಸುಮಾರು 5 ಎಕರೆ ಜಾಗದಲ್ಲಿ ಮೀನುಗಾರಿಕಾ ಚಟುವಟಿಕೆಗಳಾದ ಮೀನು ಹಿಡಿದು ಬಂದು ಸಗಟು ಮತ್ತು ರಿಟೈಲ್ ಮಾರಾಟ, ಒಣಮೀನು ತಯಾರಿ, ಬಲೆ ನಿರ್ಮಾಣ, ಕೋಲ್ಡ್ ಸ್ಟೋರೇಜ್ ಮೊದಲಾದ ಕಾರ್ಯಗಳನ್ನು ಇಲ್ಲಿ ಮಾಡಲಾಗುವುದು. ಮಂಗಳೂರಿನ ಸಸಿಹಿತ್ಲುವಿನಲ್ಲಿ ಇದನ್ನು ಮಾಡುವ ಚಿಂತನೆಯಿದೆ. ಹಾಗೂ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿಯು ಇದರ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಇದೆ ಎಂದರು. 

ಕರಾವಳಿಯ ಕುಚ್ಚಲಕ್ಕಿಗೆ ಜಿಯೋ ಟ್ಯಾಗ್ ಮಾನ್ಯತೆಗಾಗಿ ಪ್ರಕ್ರಿಯೆ ನಡೆಸಲು‌ ನಿರ್ಧರಿಸಲಾಗಿದೆ ಎಂದ ಅವರು ಈ ಬಗ್ಗೆ ಈಗಾಗಲೇ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಮುದ್ರ ನೀರಿನ ಗುಣಮಟ್ಟ ಪರಿಶೀಲನೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಗೋವಾದ ಮೂಲಕ ಕರ್ನಾಟಕದ ಎಲ್ಲಾ ಮೂರು ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ನೀರಿನ ಮಟ್ಟದ ವಿಶ್ಲೇಷಣೆಯನ್ನು ನಡೆಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಮೂರು ಕರಾವಳಿ ಜಿಲ್ಲೆಗಳ ಸಂಬಂಧಪಟ್ಟ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!