ಉಡುಪಿ: ಮತ್ತೆ ಕೊರೋನಾ ಆರ್ಭಟ, 53 ಮಂದಿಯಲ್ಲಿ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಕೊರೋನಾ ಸೋಂಕಿನ ಆರ್ಭಟ ಮುಂದುವರಿದಿದ್ದು, 53 ಮಂದಿಯ ವರದಿಯಲ್ಲಿ ಕೊರೋನಾ ಸೋಂಕು ಪಾಸಿಟಿವ್ ಧೃಢ ಪಟ್ಟಿದೆ.
ಕುಂದಾಪುರದಲ್ಲಿ ಇಬ್ಬರು ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಉಪವಿಭಾಗ ಕಚೇರಿಯ ಪೊಲೀಸ್ ಸಿಬ್ಬಂದಿ, ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ ಐ ಮತ್ತು ಅವರ ಕಾರು ಚಾಲಕನಿಗೆ ಕೋವಿಡ್-19 ಸೋಂಕು ದೃಢವಾಗಿದೆ.
313 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆದಿದ್ದು, ಅದರಲ್ಲಿ 260 ಮಾದರಿಗಳ ವರದಿ ನೆಗೆಟಿವ್ ಆಗಿದ್ದರೆ, 53 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಧೃಢ ಪಟ್ಟಿದೆ.
ಉಡುಪಿ ಜಿಲ್ಲೆಯಲ್ಲಿ ಸೋಂಕು ದೃಢವಾದ 1661 ಮಂದಿಯಲ್ಲಿ 1280 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 378 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 22,533 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಅದರಲ್ಲಿ 19,123 ಜನರ ವರದಿ ನೆಗಟಿವ್ ಬಂದಿದೆ. 1661 ಮಂದಿಯ ವರದಿ ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ ಇನ್ನೂ 1749 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲು ಬಾಕಿಯಿದೆ.
ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 73 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 757ಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 47 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 71 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ.
ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1315 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 2738 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 41,581ಕ್ಕೇರಿಕೆಯಾಗಿದೆ.