ಕಾರ್ಕಳ ಕ್ರಶರ್ ಮಾಲಿಕನಿಗೆ ಹಣಕ್ಕಾಗಿ ಬೆದರಿಸಿದ ರವಿ ಶೆಟ್ಟಿ ವಿರುದ್ಧ ದೂರು ದಾಖಲು
ಕಾರ್ಕಳ, ಅ.31: ಕ್ರಶರ್ ಮಾಲಕರೊಬ್ಬರಿಗೆ ಲಕ್ಷಾಂತರ ರೂ. ಹಣದ ಬೇಡಿಕೆ ಇಟ್ಟು ಬೆದರಿಕೆ ಹಾಕಿರುವ ಕುರಿತು ಪೊಲೀಸರಿಗೆ ದೂರು ನೀಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಈ ಬಗ್ಗೆ ಶ್ರೀದುರ್ಗಾ ಕ್ರಶರ್ ಮಾಲಕ ಬೆಳ್ಮಣ್ ಪೇರಲ್‍ಪಾದೆಯ ನಿತ್ಯಾನಂದ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನಿತ್ಯಾನಂದ ಶೆಟ್ಟಿ ಅವರಿಗೆ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು 10 ಲಕ್ಷ ರೂ.ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಇವರ ಕ್ರಶರ್‍ಗೆ ಬೈಂದೂರಿನ ರವಿಶೆಟ್ಟಿ ಬಂದು ಜಲ್ಲಿ ಕೊಂಡು ಹೋಗುತ್ತಿದ್ದಾಗ ಅವರಿಬ್ಬರ ಪರಿಚಯವಾಗಿತ್ತು. ಸಪ್ಪೆಂಬರ್ 10ರಂದು ನಿತ್ಯಾನಂದ ಶೆಟ್ಟಿಯ ಮೊಬೈಲ್‍ಗೆ ಕರೆ ಮಾಡಿದ್ದ ರವಿ ಶೆಟ್ಟಿ, ತನ್ನ ಪರಿಚಯ ಮಾಡಿಕೊಂಡು, ತಾನು ಪ್ರಸ್ತುತ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷನಾಗಿದ್ದು, ಮೌಖಿಕವಾಗಿ ಮಾತನಾಡಲಿದೆ ಎಂದು ಸಮಯವನ್ನು ಗೊತ್ತು ಪಡಿಸಿದ್ದನು. ಈ ನಡುವೆ ಅ. 26 ರಂದು ನಿತ್ಯಾನಂದ ಶೆಟ್ಟಿ ಅವರು ಬೆಳ್ಮಣ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಇದ್ದಾಗ ಕಾರಿನಲ್ಲಿ ಅಲ್ಲಿಗೆ ಬಂದ ರವಿಶೆಟ್ಟಿ, ನಿಮ್ಮ ಹಾಗೂ ನಿಮ್ಮ ಪಕ್ಕದಲ್ಲಿರುವ ಜೆ.ಎಲ್ ಕ್ರಶರ್‍ನ ಮಾಲಿಕ ಲ್ಯಾನ್ಸಿ ಡಿಕೋಸ್ತಾ ಒಟ್ಟು ಸೇರಿ 10 ಲಕ್ಷ ಮೊತ್ತವನ್ನು ತನಗೆ ನೀಡಬೇಕು. ಇಲ್ಲವಾದರೆ ನಿಮ್ಮ ಕ್ರಶರನ್ನು ಮುಚ್ಚುವುದಾಗಿ ಬೆದರಿಸಿ ಅಲ್ಲಿಂದ ಹೊರಟು ಹೋಗಿದ್ದನು.
ಬಳಿಕ ಅ.30 ರ ಬೆಳಿಗ್ಗೆ 11ಗಂಟೆಗೆ ನಿತ್ಯಾನಂದ ಶೆಟ್ಟಿ ಅವರ ಕ್ರಶರ್‍ನ ಪಕ್ಕದ ಕ್ರಶರ್‍ನ ರೈಟರ್ ಕರುಣಾಕರ ಶೆಟ್ಟಿ ಕರೆ ಮಾಡಿ, ಮೂವರು ಗಂಡಸರು ಹಾಗೂ ಮಹಿಳೆಯೊಬ್ಬರು ಕಾರಿನಲ್ಲಿ ನಿಮ್ಮ ಕ್ರಶರ್‍ನ ಬಳಿ ಬಂದು ಕ್ರಶರ್‍ನ ಹಾಗೂ ಪಾದೆಯ ಫೋಟೋ ತೆಗೆಯುತ್ತಿದ್ದಾರೆಂಬ ಮಾಹಿತಿಯನ್ನು ನೀಡಿದ್ದರು.
ಆ ಮಾಹಿತಿಯನ್ವಯ ನಿಯಾನಂದ ಶೆಟ್ಟಿ ಘಟನಾ ಸ್ಥಳಕ್ಕೆ ಬಂದಾಗ ರವಿ ಶೆಟ್ಟಿ ಹಾಗೂ ಆತನ ಸಹಚರರು ಯಾವುದೋ ದುರುದ್ದೇಶ ಪೂರಕವಾಗಿ ಈ ಕೃತ್ಯ ನಡೆಸುತ್ತಿದ್ದು, ಅವರಲ್ಲಿ ವಿಚಾರಿಸಿದಾಗ ಐದು ಲಕ್ಷ ಬೇಡಿಕೆ ಮುಂದಿಟ್ಟಿದ್ದಾರೆ. ಇಲ್ಲವಾದರೆ ಕ್ರಶರ್‍ರನ್ನು ಮುಚ್ಚಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅದರಂತೆ ಕ್ರಶರ್‍ಗೆ ಅತಿಕ್ರಮಿಸಿ, ಫೋಟೋಗಳನ್ನು ತೆಗೆದು, ಐದು ಲಕ್ಷ ಮೊತ್ತದ ಬೇಡಿಕೆಯನ್ನು ಮುಂದಿಟ್ಟ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ರವಿಶೆಟ್ಟಿ ಬೈಂದೂರು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನಂತೆ ಆರೋಪಿ ರವಿಶೆಟ್ಟಿ ಹಾಗೂ ಇತರ ನಾಲ್ವರ ವಿರುದ್ಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.