2020ರಲ್ಲಿ ಭಾರತದಲ್ಲಿ ಕಾರ್ಮಿಕರ, ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣ ಶೇ.10ರಷ್ಟು ಏರಿಕೆ

ಹೊಸದಿಲ್ಲಿ, ಅ.31: ಕಳೆದೊಂದು ವರ್ಷಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಇದಕ್ಕೆ ಕಾರಣ ಅನೇಕ ಇರಬಹುದು. ಆದರೆ ವದಿಯ ಪ್ರಕಾರ 2019ರಲ್ಲಿ ಸಂಭವಿಸಿದ ಆತ್ಮಹತ್ಯಾ ಸಾವುಗಳಿಗಿಂತ ಕಳೆದ ವರ್ಷ ಸಂಭವಿಸಿದ ಆತ್ಮಹತ್ಯೆಗಳ ಸಂಖ್ಯೆ ಶೇ.10ರಷ್ಟು ಏರಿಕೆಯಾಗಿದೆ.

ಈ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಇಲಾಖೆ (ಎನ್‍ಸಿಆರ್‍ಬಿ)ಯು 2020ರಲ್ಲಿ ಭಾರತದಲ್ಲಿ ಆಕಸ್ಮಿಕ ಸಾವುಗಳು ಹಾಗೂ ಆತ್ಮಹತ್ಯೆಗಳ ಕುರಿತ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಈ ವರದಿಯಲ್ಲಿ, ಕೋವಿಡ್-19 ಸೋಂಕಿನ ವರ್ಷದಲ್ಲಿ ರಸ್ತೆ ಅಪಘಾತ ಹಾಗೂ ಅದಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಇಳಿಕೆಯುಂಟಾಗಿದೆ. ಆದರೆ ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 1,53,052ಕ್ಕೆ ತಲುಪಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ. 2019ರಲ್ಲಿ ಸಂಭವಿಸಿದ ಆತ್ಮಹತ್ಯಾ ಸಾವುಗಳಿಗಿಂತ ಕಳೆದ ವರ್ಷ ಶೇ.10ರಷ್ಟು ಏರಿಕೆಯಾಗಿದೆ. ಹಾಗೂ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಪ್ರತಿ ಒಂದು ಲಕ್ಷ ಜನ ಸಂಖ್ಯೆಗೆ 11.3 ಶೇಕಡ ಆಗಿದ್ದರೆ, 2019ರಲ್ಲಿ ಇದು 10.4 ಶೇಕಡ ಆಗಿತ್ತು. ಇದು 2010 ಕ್ಕಿಂತ ಶೇ.11.4ರಷ್ಟು ಅಧಿಕವಾಗಿದೆ ಎಂದು ವರದಿ ತಿಳಿಸಿದೆ.

2020ರಲ್ಲಿ ಆತ್ಮಹತ್ಯೆಗೆ ಶರಣಾದವರಲ್ಲಿ ದಿನಗೂಲಿ ಕಾರ್ಮಿಕರು ಅತ್ಯಧಿಕ ಪ್ರಮಾಣದಲ್ಲಿದ್ದಾರೆ. ಕಳೆದ ವರ್ಷ ಲಾಕ್‍ ಡೌನ್ ಹೇರಿಕೆಯ ಬಳಿಕ ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ದಿನಗೂಲಿ ಕಾರ್ಮಿಕರು ತಮ್ಮ ಊರುಗಳಿಗೆ ನಿರ್ಗಮಿಸಿ, ಅಲ್ಲಿ ಉದ್ಯೋಗವನ್ನು ಅರಸಬೇಕಾದಂತಹ ಅತಂತ್ರ ಪರಿಸ್ಥಿತಿಯುಂಟಾಗಿತ್ತು. 2020ರಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.24.6 ಶೇಕಡ ಮಂದಿ ದಿನಗೂಲಿ ಕಾರ್ಮಿಕರಾಗಿದ್ದು. 2014ರಲ್ಲಿ ಶೇ.12ರಷ್ಟು ದಿನಗೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ, 2020ರಲ್ಲಿ ಆ ಸಂಖ್ಯೆ 24.6 ಶೇ ತಲುಪಿದ್ದು, ಆರು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 
ಇತ್ತ ಸಾವಿಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 2020ರಲ್ಲಿ ಒಟ್ಟು 14,825 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಸಾವಿಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ 10,335 ಆಗಿದ್ದು, ಕಳೆದ ವರ್ಷ ಶೇ.21.20ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಡ ಸ್ವೋದ್ಯೋಗಿಗಳ ಸಂಖ್ಯೆಯಲ್ಲೂ ಅದರ ಹಿಂದಿನ ವರ್ಷಕ್ಕಿಂತ ಶೇ.7.67 ರಷ್ಟು ಹೆಚ್ಚಳವಾಗಿದೆ. ವ್ಯಾಪಾರಿಗಳ ಆತ್ಮಹತ್ಯೆ ಪ್ರಮಾಣದಲ್ಲಿ 2019 ಕ್ಕಿಂತ ಶೇ.26.1ರಷ್ಟು ಹೆಚ್ಚಳ ವಾಗಿದೆ. ಹಾಗೂ 2022ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದವರ ಪೈಕಿ ಗೃಹಿಣಿಯರು (ಶೇ.14.6), ಸ್ವೋದ್ಯೋಗಿಗಳು (11.3 ಶೇ.), ವೃತ್ತಿಪರ/ವೇತನದಾರರು (ಶೇ.9.7), ರೈತರು/ಕೃಷಿಕರು (ಶೇ.7), ನಿವೃತ್ತ ನೌಕರರು (1ಶೇ.) ಹಾಗೂ ಶೇ.13.4 ಇತರ ಶ್ರೇಣಿಯವರಾಗಿದ್ದಾರೆಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!