| ಹೆಬ್ರಿ, ಅ.27: ಹೆಬ್ರಿಯ ಕನ್ಯಾನ ಎಂಬಲ್ಲಿ 2017 ರ ಡಿ.2 ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನಿಗೆ ಜೈಲು ಶಿಕ್ಷೆ ನೀಡಿ ನ್ಯಾಯಾಲಯ ತೀರ್ಪು ನೀಡಿದೆ.
ಅಭಿಷೇಕ್ ಕುಮಾರ್ (22) ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಆರೋಪಿ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕಾರ್ಕಳದ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಚೇತನಾ ಎಸ್.ಎಫ್ ತೀರ್ಪು ನೀಡಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು 7 ಮಂದಿ ಸಾಕ್ಷಿದಾರ ಹೇಳಿಕೆಯನ್ನು ಪ್ರಕರಣಕ್ಕೆ ಸಂಬಂಧಿಸಿ ಸಂಗ್ರಹಿಸಿತ್ತು. ಆರೋಪಿಯ ವಿರುದ್ಧ ಹೇರಲಾದ ಕಲಂ 279,304 (ಎ) ಯಡಿಯಲ್ಲಿ ಆರೋಪಿ ಎಸಗಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದ ನ್ಯಾಯಾಧೀಶರು ಕಲಂ 279ರಡಿಯಲ್ಲಿ ಅಪರಾಧಿಯ ಕೃತ್ಯಕ್ಕೆ 1,000 ದಂಡ ತಪ್ಪಿದಲ್ಲಿ ಒಂದು ತಿಂಗಳ ಸಾದ ಶಿಕ್ಷೆ. ಕಲಂ 304 ಭಾರತ ಐಪಿಸಿ ಪ್ರಕಾರ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ 6 ತಿಂಗಳ ಕಾಲ ಸಜೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ. ದಂಡ ವಿಧಿಸಲು ತಪ್ಪಿದಲ್ಲಿ ಮತ್ತೇ 2 ತಿಂಗಳ ಸಾದ ಸಜೆ ನೀಡಿ ತೀರ್ಪು ವಿಧಿಸಿದ್ದಾರೆ.
2017 ರ ಡಿಸೆಂಬರ್ 2 ರಂದು ಮಧ್ಯಾಹ್ನ 3.15ರ ಸುಮಾರಿಗೆ ಉಡುಪಿಯಿಂದ ಹೆಬ್ರಿ ಕಡೆಗೆ ಪ್ರವೀಣ್ ಪೂಜಾರಿ ಅವರು ಬರುತ್ತಿದ್ದ ಬೈಕ್ ಗೆ ಹೆಬ್ರಿಯ ಕನ್ಯಾನ ಎಂಬಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿವಾಸಿ ಅಭಿಷೇಕ್ ಕುಮಾರ್ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯ ತನದಿಂದ ರಸ್ತೆಯ ಬಲಬದಿಯಲ್ಲಿ ಹಾದು ಹೋಗಿರುವುದು ಅಪಘಾತ ಕ್ಕೆ ಕಾರಣವಾಗಿತ್ತು. ಇದರ ಪರಿಣಾಮವಾಗಿ ಬೈಕ್ ಸವಾರ ಪೆರ್ಡೂರಿನ ಪ್ರವೀಣ್ ಪೂಜಾರಿ ಡಾಂಬರು ರಸ್ತೆಗೆ ಬಿದ್ದು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆದಲ್ಲಿ ಅವರು ಮೃತಪಟ್ಟಿದ್ದರು. ಈ ಕುರಿತು ಅಂದು ಹೆಬ್ರಿ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
| |