ಬಲಿಪಾಡ್ಯದಂದು ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ- ಮುಜರಾಯಿ ಇಲಾಖೆ ಆದೇಶ
ಬೆಂಗಳೂರು ಅ.26: ಗೋಪೂಜೆ ಸಂಪ್ರದಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ದೀಪಾವಳಿಯ ಬಲಿಪಾಡ್ಯದಂದು ಕಡ್ಡಾಯವಾಗಿ ಗೋಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ, ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪುರಾಣ ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ವಾಸ್ತು ದೋಷವು ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ನಮ್ಮ ಸಮಾಜದಲ್ಲಿದೆ. ಈ ಹಿನ್ನೆಲೆಯಲ್ಲಿ ಗೋಪೂಜೆ ಸಂಪ್ರದಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ದೀಪಾವಳಿಯ ಬಲಿಪಾಡ್ಯದಂದು ಕಡ್ಡಾಯವಾಗಿ ಗೋಪೂಜೆ ನಡೆಸುವಂತೆ ತಿಳಿಸಲಾಗಿದೆ.