| ಮಣಿಪಾಲ, ಅ.26 (ಉಡುಪಿ ಟೈಮ್ಸ್ ವರದಿ): ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ 5ನೇ ಆವೃತ್ತಿಯ ಮ್ಯಾರಥಾನ್ ರೇಸ್ ಟು ಬೀಟ್ ದಿ ವೇವ್’ ಅನ್ನು 2022 ರ ಫೆ.13 ರಂದು ನಡೆಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಶಾಸಕ ರಘುಪತಿ ಭಟ್ ಅವರು, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ 5ನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್ ಅಂದರೆ ಎಂಎಂ 2022 ಅನ್ನು 2022 ರ ಫೆ.13 ರಂದು ನಡೆಸಲು ನಿರ್ಧರಿಸಿದೆ. ಪ್ರಧಾನಿ ಮೋದಿಯವರು ನೀಡಿದ ಫಿಟ್ ಇಂಡಿಯಾ’ ಕರೆಗೆ ಬೆಂಬಲಿಸುವ ಸಲುವಾಗಿ ಈ ಮ್ಯಾರಥಾನ್ ಆಯೋಜಿಸಲಾಗಿದೆ. ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಕನಿಷ್ಠ ಅರ್ಧ ಘಂಟೆಯಾದರೂ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ.
ಈ ವೇಳೆ ಮಾಹೆಯ ಸಹ ಕುಲಪತಿ ಡಾ. ಹೆಚ್.ಎಸ್.ಬಲ್ಲಾಳ್ ಅವರು ಮಾತನಾಡಿ, ಓಟವು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಅತ್ಯುತ್ತಮ ವಿಧಾನವಾಗಿದೆ. ಇದು ನಿಮ್ಮ ಅರೋಗ್ಯದ ಪ್ರತಿಯೊಂದು ಭಾಗಕ್ಕೂ ಪ್ರಯೋಜನವನ್ನು ನೀಡುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿ ಮತ್ತು ಆನಂದವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸಲು ದೈಹಿಕ ಚಟುವಟಿಕೆಯು ಅತ್ಯಗತ್ಯ ಎಂದು ನಾವು ಬಲವಾಗಿ ಭಾವಿಸುತ್ತೇವೆ ಮತ್ತು ನಾವು ಈ ಮಹತ್ವದ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದೇವೆ. ಈ ಮ್ಯಾರಥಾನ್ ನಲ್ಲಿ ಎಲ್ಲಾ ಕೋವಿಡ್ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಮಾಹೆಯ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್ ಅವರು ಮಾತನಾಡಿ, ಇದು ಹೊಸ ಜನರನ್ನು ಭೇಟಿ ಮಾಡಲು ಮತ್ತು ಬಲವಾದ ಸಂಬಂಧಗಳನ್ನು ರೂಪಿಸಲು ನಿಮಗೆ ಸಹಾಯ ಮಾಡುವ ದೈಹಿಕ ವ್ಯಾಯಾಮವಾಗಿದೆ. ಗುರಿಗಳನ್ನು ರೂಪಿಸಲು ಮತ್ತು ಸಾಧಿಸಲು ಓಟವು ಉತ್ತಮ ವಿಧಾನವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಸಾಮಾನ್ಯ ಸೇವೆಗಳ ನಿರ್ದೇಶಕ ಕರ್ನಲ್ ಪ್ರಕಾಶ್ ಚಂದ್ರ, ಕ್ರೀಡಾ ಪರಿಷತ್ತಿನ ಜಂಟಿ ಕಾರ್ಯದರ್ಶಿ ಡಾ ಶೋಭಾ ಈರಪ್ಪ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್ ಪಿ ಕರ್, ಮಾಹೆ ಮತ್ತು ಮಾಹೆ ಕ್ರೀಡಾ ಷತ್ತಿನ ಕಾರ್ಯದರ್ಶಿ ಡಾ ವಿನೋದ್ ನಾಯಕ್ ಉಪಸ್ಥಿತರಿದ್ದರು.
| |