ಸಿಎಂ ಹೇಳಿಕೆ ಬಳಿಕ ನೈತಿಕ ಪೊಲೀಸ್’ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿ ಹೆಚ್ಚುತ್ತಿವೆ: ಪೀಟರ್ ಮಚಾದೊ
ಬೆಂಗಳೂರು: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಚಿಂತನೆ ಕೈಬಿಡಬೇಕು ಮತ್ತು ಕ್ರೈಸ್ತ ಸಮುದಾಯದ ಚರ್ಚ್ ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿ ನಡೆಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಮತ್ತು ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟ ಅಧ್ಯಕ್ಷರೂ ಆಗಿರುವ ಬೆಂಗಳೂರು ಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಪೀಟರ್ ಮಚಾದೊ ಒತ್ತಾಯಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂತರ ನಡೆಯುತ್ತಿರುವ ಕುರಿತ ಬಿರುಸಿನ ಚರ್ಚೆ ನಡೆಯುತ್ತಿದೆ. ಹೀಗಾಗಿ, ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದನ್ನು ಕ್ರೈಸ್ತ ಸಮುದಾಯ ಒಕ್ಕೊರಲಿನಿಂದ ವಿರೋಧಿಸುತ್ತದೆ ಎಂದರು.
ಒಬ್ಬರು ಯಾವುದೇ ಧರ್ಮವನ್ನು ಆಚರಿಸಲು ಸಂವಿಧಾನ ಹಕ್ಕು ನೀಡಿದೆ. ಹೀಗಿರುವಾಗ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಏನು. ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ ಎಂದು ಅವರು ಹೇಳಿದರು.
‘ರಾಜ್ಯದಲ್ಲಿರುವ ಕ್ರೈಸ್ತ ಸಮುದಾಯದ ಚರ್ಚ್‌ಗಳ ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿ ನಡೆಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶಿಸಿದೆ. ಈ ಗಣತಿಯ ಉದ್ದೇಶವಾದರೂ ಏನು. ಸರ್ಕಾರ ಗಣತಿ ಮಾಡುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ, ನಮ್ಮ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿ ನಡೆಸಲು ಆದೇಶಿಸಿರುವುದೇಕೆ. ಚರ್ಚುಗಳ ವಿವರಗಳೆಲ್ಲವೂ ಈಗಾಗಲೇ ಸರ್ಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ನಡೆಸುವ ಅಗತ್ಯವಾದರೂ ಏನು‘ ಎಂದೂ ಪ್ರಶ್ನಿಸಿದರು.
‘ಕ್ರೈಸ್ತ ಸಮುದಾಯದ ಜನಸಂಖ್ಯೆಯ ಅಂಕಿ-ಅಂಶಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಳಿ ಈಗಾಗಲೇ ಇವೆ. ದೇಶದಲ್ಲಿ ದೊಡ್ಡ ಮಟ್ಟಿಗೆ ಮತಾಂತರ ನಡೆಯುತ್ತಿದೆ ಎಂದು ಆರೋಪಿಸುವವರು ಈ ಅಂಕಿ-ಅಂಶಗಳನ್ನು ಪರಿಶೀಲಿಸಿದರೆ ಸತ್ಯಾಂಶ ಗೊತ್ತಾಗುತ್ತದೆ. ಮತಾಂತರ ನಿಜವೇ ಆಗಿದ್ದರೆ, ನಮ್ಮ ಸಮುದಾಯದ ಸಂಖ್ಯೆ ಹೆಚ್ಚಳ ಆಗಬೇಕಿತ್ತು. ದೇಶದ ಸ್ವಾತಂತ್ರ್ಯದ ನಂತರವೂ ಜನಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯ ಕೇವಲ ಶೇ 1.8ರಷ್ಟು ಮಾತ್ರವಿದೆ’ ಎಂದರು.
‘ರಾಜ್ಯ ಹಾಗೂ ರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯ ಸಾವಿರಾರು ಶಾಲಾ ಕಾಲೇಜುಗಳ ಮತ್ತು ಆಸ್ಪತ್ರೆಗಳ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದೆ. ಕ್ರೈಸ್ತ ಶಾಲಾ ಕಾಲೇಜುಗಳಲ್ಲಿ ಓದಿದವರು, ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡ ಕ್ರೈಸ್ತೇತರರಲ್ಲಿ ಯಾರದೂ ಒಬ್ಬರು ತನ್ನನ್ನು ಮತಾಂತರಗೊಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದ ಅವರು, ‘ಈ ಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ, ಅದರಿಂದ ಒಳಿತಾಗದು. ಅದರ ಬದಲು ಈ ಕಾಯ್ದೆ ಕೋಮುವಾದಿಗಳ ಕೈಗೆ ಸಿಕ್ಕಿ, ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಸಾಧ್ಯ ಆಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
ನೈತಿಕ ಪೊಲೀಸ್‍ಗಿರಿಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಯಾವುದೇ ಒಂದು ಘಟನೆಗೆ ಪ್ರತಿಕ್ರಿಯೆ ಇರುತ್ತದೆ‘ ಎಂದು ಮುಖ್ಯಮಂತ್ರಿ ಹೇಳಿದ ನಂತರ ರಾಜ್ಯದಲ್ಲಿ ನೈತಿಕ ಪೊಲೀಸ್‍ಗಿರಿ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ, ಹಲ್ಲೆಗಳೂ ಹೆಚ್ಚುತ್ತಿವೆ. ಇನ್ನು ಮತಾಂತರ ನಿಷೇಧ ಕಾಯ್ದೆ ಬಂದರೆ, ಇಂಥ ದಾಳಿಗಳು ಮತ್ತಷ್ಟು ಹೆಚ್ಚಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.