| ಬೆಂಗಳೂರು, ಅ.23: ಪಠ್ಯದಲ್ಲಿ ಚಾರಿತ್ರಿಕ ಸತ್ಯ ತಿರುಚಿದರೆ ರಾಜ್ಯದೆಲ್ಲೆಡೆ ಪ್ರತಿರೋಧದ ಹೋರಾಟ ಕೈಗೆತ್ತಿ ಕೊಳ್ಳಲಾಗುವುದು ಎಂದು ನಗರದ ಕುಮಾರಕೃಪಾದಲ್ಲಿರುವ ಗಾಂಧಿ ಭವನ ಸಭಾಂಗಣದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ನಿರ್ಣಯಿಸಲಾಯಿತು.
ಇಂದು ದಲಿತ ಸಂಘಟನೆಗಳ ಜಂಟಿ ವೇದಿಕೆ ಸಹಯೋಗದೊಂದಿಗೆ ನಡೆದ ಈ ಸಭೆಯಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಈ ಹಿಂದೆ ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಗಳ ಅಪಪ್ರಚಾರ ಅಥವಾ ಚಾರಿತ್ರಿಕ ಸತ್ಯ ತಿರುಚಿದರೆ ರಾಜ್ಯದೆಲ್ಲೆಡೆ ಪ್ರತಿರೋಧದ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಗತಿಪರ ಹೋರಾಟಗಾರರು ಒಕ್ಕೂರಲಿನಿಂದ ಕರೆಕೊಟ್ಟರು.
ಈ ಸಂದರ್ಭದಲ್ಲಿ ಅಭಿಪ್ರಾಯ ಮಂಡಿಸಿ, ಪಠ್ಯ ಪುಸ್ತಕ ಪರಿಷ್ಕರಣೆ ಹಿಂದೆ ರಾಜಕಾರಣ ಅಡಗಿದೆ. ಈ ಹುನ್ನಾರವನ್ನು ಸರಕಾರ ಮುಂದುವರಿಸಿದರೆ, ಚಾರಿತ್ರಿಕ ಸತ್ಯಗಳನ್ನು ತಿರುಚಿದರೆ ಪ್ರತಿರೋಧ ಒಡ್ಡಲಾಗುವುದು ಎಂದು ನಿಲುವು ವ್ಯಕ್ತಪಡಿಸಿದರು. ಸಭೆಯ ಬಳಿಕ ನಿರ್ಣಯ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ಈ ಪತ್ರದಲ್ಲಿ ಪರಿಷ್ಕರಣೆಗೊಂಡ ಪಠ್ಯ ಪುಸ್ತಕಗಳು ಜಾರಿಗೆ ಬಂದು ನಾಲ್ಕು ಶೈಕ್ಷಣಿಕ ವರ್ಷಗಳು ಮುಗಿದ ಬಳಿಕ ಎಬ್ಬಿಸುತ್ತಿರುವ ವಿವಾದದ ಹಿಂದೆ ಶೈಕ್ಷಣಿಕ ಕಾರಣಗಳು ಕಾಣಿಸುತ್ತಿಲ್ಲ. ಒಂದು ವೇಳೆ ದೋಷಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡುವ ಕೆಲಸ ಮಾಡುವವರು ಆಯಾ ವಿಷಯಗಳಿಗೆ ಸಂಬಂಧಿಸಿದ ಶಿಕ್ಷಣ ತಜ್ಞರೇ ಹೊರತು ರಾಜಕೀಯ ಪಕ್ಷದ ಜೊತೆ ಸಂಪೂರ್ಣ ಗುರುತಿಸಿ ಕೊಂಡವರಲ್ಲ. ಅದರಲ್ಲೂ ಮೂಲಭೂತವಾದಿಗಳಂತೂ ಅಲ್ಲವೇ ಅಲ್ಲ ಎಂದು ಉಲ್ಲೇಖಿಸಲಾಗಿದೆ.
ಈಗ ಮೂಲಭೂತವಾದಿಗಳ ಕೈಗೆ ಮಕ್ಕಳ ಭವಿಷ್ಯ ಕೊಡುವ ಹುನ್ನಾರ ಮುಂದುವರಿದರೆ ಹೋರಾಟ ಅನಿವಾರ್ಯ ವಾಗಲಿದೆ. ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಲಿಖಿತವಾಗಿ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ ಮತ್ತೊಂದೆಡೆ, ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಕ್ಷುಲ್ಲಕ ಹಾಗೂ ಮತೀಯ ರಾಜಕೀಯ ಮಾಡಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಇತಿಹಾಸ ತಿರುಚಲು ಹೊರಟಿರುವ ಮುನ್ಸೂಚನೆ ಕಾಣಿಸುತ್ತಿದೆ. ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ ಹಲ್ಲೆ ಮಾಡುತ್ತಿದ್ದರು ಎಂದು ಶಿಕ್ಷಣ ಸಚಿವರೇ ಹೇಳುವ ಮೂಲಕ ಪರಿಷ್ಕರಣೆ ಮಾಡಿದವರ ಮೇಲೆ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಪರಿಶೀಲಿಸಲು ಈಗ ನೇಮಕಗೊಂಡಿರುವ ಅಧ್ಯಕ್ಷರು ಎಲ್ಲ ಪುಸ್ತಕಗಳನ್ನು ಸಮಗ್ರವಾಗಿ ಪರಿಶೀಲಿಸುವ ಮೊದಲೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದಿನ ಅಧ್ಯಕ್ಷರ ವಿರುದ್ಧ ವೈಯಕ್ತಿಕ ತೇಜೋವಧೆಗೆ ಮುಂದಾಗಿದ್ದಾರೆ. ಈ ಎಲ್ಲಾ ಪ್ರವೃತ್ತಿಗಳನ್ನು ಸಭೆ ಖಂಡಿಸುತ್ತದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಈ ಸಭೆಯಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್, ಚಿಂತಕ ಎಸ್.ಜಿ. ಸಿದ್ಧರಾಮಯ್ಯ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಹೋರಾಟಗಾರ ಗುರುಪ್ರಸಾದ್ ಕೆರಗೋಡು, ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್, ರಾಜಶೇಖರಮೂರ್ತಿ ಸೇರಿದಂತೆ ಹಲವು ಚಿಂತಕರು ಭಾಗವಹಿಸಿದ್ದರು.
| |