ಧರ್ಮ,ಗೋಹತ್ಯೆ ಹೆಸರಿನಲ್ಲಿ ಮರಳು ಮಾಡುವ ಬಿಜೆಪಿಗೆ ಜನರ ಬದುಕಿನ ವಿಚಾರ ಬೇಡ: ಮಂಜುನಾಥ ಪೂಜಾರಿ
ಹೆಬ್ರಿ: ಮನಮೋಹನ್ ಸಿಂಗ್ ಸರ್ಕಾರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ವೀರಪ್ಪ ಮೊಯಿಲಿ ಬ್ಯಾರಲ್ ಬೆಲೆ 140 ಇದ್ದರೂ 60 ರೂಪಾಯಿಗೆ ಪೆಟ್ರೋಲ್ ಮತ್ತು 400 ರೂಪಾಯಿ ಅಡುಗೆ ಅನಿಲ ನೀಡಿದ್ದಾರೆ. ಈಗ 30ರಿಂದ 40 ರೂಪಾಯಿ ಬ್ಯಾರಲ್ ಬೆಲೆ ಇದೆ. ಲೀಟರ್ ಗೆ 40 ರೂಪಾಯಿಗೆ ಪೆಟ್ರೋಲ್ ನೀಡಬಹುದು, ಬಿಜೆಪಿಯವರಿಗೆ ವೀರಪ್ಪ ಮೊಯಿಲಿಯವರನ್ನು ಟೀಕಿಸುವ ಯಾವೂದೇ ನೈತಿಕತೆ ಇಲ್ಲ. ವೀರಪ್ಪ ಮೊಯಿಲಿ ಏನು ಎಂದು ಕಾರ್ಕಳದ ಸಮಸ್ತ ಜನತೆಗೆ ಗೊತ್ತಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಕಳದಲ್ಲಿ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ, ನಮಗೆ ಬಿಜೆಪಿಯವರಿಂದ ಪಾಠ ಕಲಿಯುವ ಅಗತ್ಯ ಇಲ್ಲ. ಕಾರ್ಕಳ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ತೀರ್ಮಾನಿಸಲು ವೀರಪ್ಪ ಮೊಯಿಲಿ ಸಮರ್ಥರಿದ್ದಾರೆ ಎಂದು ಹೇಳಿದ ಮಂಜುನಾಥ ಪೂಜಾರಿ, ರಾಜ್ಯ ಮತ್ತು ದೇಶದ ಬಿಜೆಪಿಯವರು ಅಧಿಕಾರ ಹಿಡಿಯಲು ಮಾಡುವ ನಾಟಕ ಈಗ ಎಲ್ಲರಿಗೂ ತಿಳಿದಿದೆ. ಮತಾಂತರ, ಭಾರತ ಮಾತೆ, ಗೋಹತ್ಯೆ ಗೋಮಾತೆಯ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಬರುತ್ತಾರೆ. ವಿಶ್ವದಲ್ಲೇ ಗೋಮಾಂಸ ರಪ್ತು ಮಾಡುವುದರ ಲ್ಲಿ ಭಾರತ ನಂಬರ್ 1 ಎಂದು ನರೇಂದ್ರ ಮೋದಿ ಘೋಷಣೆ ಮಾಡುತ್ತಾರೆ, ಕರ್ನಾಟಕದಿಂದ ಪ್ರತಿಸಲವೂ 2000 ಸಾವಿರ ಟನ್ ಗೋಮಾಂಸ ಗೋವಾಕ್ಕೆ ಬರುತ್ತಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇದು ಬಿಜೆಪಿಯವರ ಯಾವ ನಾಟಕ ಎಂದು ಪ್ರಶ್ನಿಸಿದರು. ಮಂಗಳೂರು ಮತ್ತು ಮೂಡಬಿದರೆಯಲ್ಲೇ ಅಕ್ರಮ ಕಸಾಯಿಖಾನೆ ನಡೆಯುತ್ತಿದೆ ಈ ಬಗ್ಗೆ ಬಿಜೆಪಿಯವರ ಚಕಾರ ಇಲ್ಲ ಎಂದರು.
ಕೊರೋನದ ಹೆಸರಿನಲ್ಲಿ ಜನಸಾಮಾನ್ಯರು ಬದುಕುವ ಸ್ಥಿತಿಯಲ್ಲಿ ಇಲ್ಲ. 90 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡರು. ಲಕ್ಷಾಂತರ ಕಂಪೆನಿಗಳು ಬಾಗಿಲು ಹಾಕಿವೆ. ಮೋದಿ ಇದರ ಪುನಶ್ಚೇತನಕ್ಕೆ ಏನು ಮಾಡಿದರು. ಅವರಿಗೆ ಜನರ ಬದುಕಿನ ವಿಚಾರ ಬೇಡ. ಧರ್ಮ ಮತಾಂತರ, ಗೋಹತ್ಯೆ ಹೆಸರಿನಲ್ಲಿ ಇನ್ನೂ ಜನರನ್ನು ಮರಳು ಮಾಡಲು ಯತ್ನಿಸುತ್ತಿದ್ದಾರೆ ಎಂದರು. ಉಡುಪಿ ಜಿಲ್ಲೆಯ ಸಹಿತ ರಾಜ್ಯದೆಲ್ಲೆಡೆಯೂ ಎಗ್ಗಿಲ್ಲದೆ ಅಕ್ರಮಗಳು ನಡೆಯುತ್ತಿದೆ. ಬಿಜೆಪಿಯವರನ್ನು ಪ್ರಶ್ನಿಸುವವರೇ ಇಲ್ಲವಾಗಿದೆ, ಭ್ರಷ್ಟಾಚಾರವೇ ಬಿಜೆಪಿಯವರ ಶಿಷ್ಟಾಚಾರವಾಗಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಜನಾರ್ಧನ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಪಕ್ಷದ ವಿವಿಧ ಘಟಕಗಳ ಪ್ರಮುಖರಾದ ಲಕ್ಷ್ಮಣ ಆಚಾರ್ಯ ವರಂಗ, ಹೆಚ್.ಬಿ.ಸುರೇಶ್, ಶಶಿಕಲಾ ಡಿ.ಪೂಜಾರಿ, ಶಶಿಕಲಾ ಆರ್ ಪಿ, ವಿಶು ಕುಮಾರ್, ಹರೀಶ್, ಸಚ್ಚೀಂದ್ರ ಮತ್ತಿತತರರು ಹಾಜರಿದ್ದರು.