ರಾಜಸ್ಥಾನ: ಇತ್ತ ಸಿಎಲ್’ಪಿ ಸಭೆ, ಅತ್ತ ಕಾಂಗ್ರೆಸ್ ನಾಯಕರಿಗೆ ಐಟಿ ದಾಳಿಯ ಶಾಕ್!
ಜೈಪುರ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟ ಹೊಸ ತಿರುವು ಪಡೆದುಕೊಂಡಿದ್ದು ಕಾಂಗ್ರೆಸ್ ನಾಯಕರ ಮನೆ ಐಟಿ ದಾಳಿ ನಡೆದಿದೆ. ಐಟಿ ದಾಳಿಯ ನಡುವೆಯೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಎಲ್ ಪಿ ಸಭೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನ ಬೆಂಬಲಿಗರೂ ಸಹ ಐಟಿ ದಾಳಿಗೆ ಗುರಿಯಾಗಿದ್ದು ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.
ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಜೀವ್ ಅರೋರಾ, ಧರ್ಮೇಂದ್ರ ಚೌಧರಿ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಇಲ್ಲದ ನಗದು, ಚಿನ್ನಾಭರಣ, ಆಸ್ತಿಗಳ ದಾಖಲೆಪತ್ರ, ಲಾಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಐಟಿ ಅಧಿಕಾರಿಗಳ ತಂಡ ಬಿಲ್ವಾರಾ ಹಾಗ್ ಝಲಾವಾಡ್ ಗೂ ಭೇಟಿ ನೀಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಐಟಿ ದಾಳಿಯ ಹಿನ್ನೆಲೆಯಲ್ಲಿ 10:30 ಕ್ಕೆ ನಡೆಯಬೇಕಿದ್ದ ಸಿಎಲ್ ಪಿ ಸಭೆಯನ್ನು ಕಾಂಗ್ರೆಸ್ 11 ಗಂಟೆಗೆ ಮುಂದೂಡಿತ್ತು. ಇತ್ತೀಚಿನ ವರದಿಯ ಪ್ರಕಾರ ಸಿಎಲ್ ಪಿ ಸಭೆಯಲ್ಲಿ ಭಾಗವಹಿಸಲು 74 ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಗಳ ನಿವಾಸದಲ್ಲಿದ್ದಾರೆ. ಐಟಿ ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ವಿಪ್ ಮಹೇಶ್ ಜೋಷಿ ಬಿಜೆಪಿ ತನಿಖಾ ಸಂಸ್ಥೆಗಳನ್ನು ತನ್ನ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.