ಕಾರ್ಕಳ: ಕಲ್ಲುಗಣಿಗಾರಿಕೆಗೆ ಸೂಕ್ತ ನಿಯಮಾವಳಿ ರೂಪಿಸುವಂತೆ ರವೀಂದ್ರ ಶೆಟ್ಟಿ ಆಗ್ರಹ

ಕಾರ್ಕಳ, ಅ.23 : ರಾಜ್ಯ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆಗೆ ಸೂಕ್ತ ನಿಯಮಾವಳಿಯನ್ನು ಕಾಲಮಿತಿಯೊಳಗೆ ತರುವಂತೆ ಫೆಡರೇಶನ್ ಆಪ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್‍ಸ್‌‌ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.

ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಣಿಗಾರಿಕೆಯಲ್ಲಿ ಸುಮಾರು 4 ಲಕ್ಷ ಕಾರ್ಮಿಕರು ದುಡಿಯುತ್ತಾ ಬದುಕು ಸಾಗಿಸುತ್ತಿದ್ದಾರೆ. ಸೂಕ್ತವಾದ ಕಾನೂನುಗಳೇ ರಚನೆಗೊಂಡಿಲ್ಲ. ಇದರಿಂದ ಅಕ್ರಮ ಗಣಿಗಾರಿಕೆ ಹಣೆಪಟ್ಟಿ ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಬಂದಿದೆ. ಗಣಿಗಾರಿಕೆಯಲ್ಲಿ ಎಲ್ಲಿಯೂ ತೊಡಕಾಗುತಿಲ್ಲ. ಸೂಕ್ತವಾದ ಕಾನೂನನ್ನು ಸರಕಾರ ಗಣಿಗಾರಿಕೆ ವಿಚಾರದಲ್ಲಿ ರೂಪಿಸದೆ ಇರುವುದರಿಂದ ಸಮಸ್ಯೆಗಳು ಕಾಡುತ್ತಿವೆ. ಗಣಿಗಾರಿಕೆ ನಡೆಸುವವರ ಮೇಲೆ ಅನೇಕ ಆರೋಪಗಳನ್ನು ಹೊರಿಸಲಾಗುತ್ತಿದೆ. ಸರಕಾರ ನಿಯಮಾವಳಿಗಳನ್ನು ಸರಿಯಾದ ರೂಪದಲ್ಲಿ ತಂದು ನಿಯಮಬದ್ಧವಾಗಿ ಗಣಿಗಾರಿಕೆ ನಡೆಸಲು ಅನುಕೂಲ ಮಾಡಿಕೊಡಬೇಕು.

ಸೂಕ್ತ ನಿಯಮಾವಳಿಗಳನ್ನು ರೂಪಿಸುವುದರಿಂದ ಸರಕಾರಕ್ಕೂ ಶೇ. 5ಕ್ಕೂ ಹೆಚ್ಚಿನ ಆದಾಯ ಲಭಿಸುತ್ತದೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದಿದ್ದೇವೆ. ಕಾನೂನು ಬದ್ಧ ಗಣಿಗಾರಿಕೆ ಅವಕಾಶ ಮಾಡಿಕೊಡಿ ಎಂದು ನಾವು ಸರಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದರು. ಇನ್ನು ಸರಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಕಚ್ಚಾ ವಸ್ತು ಒದಗಿಸುವ ಕ್ರಶರ್, ಕಲ್ಲು ಇನ್ನಿತರ ಗಣಿಗಾರಿಕೆ ಒದಗಿಸುತ್ತಿದೆ. ಜನಸಾಮಾನ್ಯರಿಗೆ, ಲಾರಿ ಮಾಲಕರಿಗೆ ಅನುಕೂಲ ಮಾಡಿಕೊಡುತ್ತಿದೆ. ಒಂದಷ್ಟು ಕಾನೂನಿನ ಸಮಸ್ಯೆಗಳು ಹಿಂದಿನಿಂದಲೂ ಗಣಿಕಾರಿಕೆಗೆ ವಿಚಾರದಲ್ಲಿ ಇದೆ. ಇದೆಲ್ಲವನ್ನು ತೊಡಗಿಸಿ ಎಲ್ಲರ ಕಾರ್‍ಯಗಳು ಸುಶೂತ್ರವಾಗಿ ನಡೆಯುವಂತಾಗ ಬೇಕು. ಸರಕಾರಕ್ಕೆ ಕಾನೂನಿನ ತೊಡಕಿನಿಂದ ಸಮಸ್ಯೆಗಳಾಗುತ್ತಿವೆ ಎನ್ನುವುದನ್ನು ಈ ಮೊದಲೆ ತಿಳಿದುಕೊಂಡು ಕ್ರಮ ಬದ್ಧವಾಗಿ ನಿಯಮ ತರುತ್ತಿದ್ದರೆ ಇಷ್ಟೊತ್ತಿಗಾಗಲೆ ಸಮಸ್ಯೆ ಬಗೆಹರಿಯುತ್ತಿತ್ತು.

ಈ ಎಲ್ಲ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಸರಿಪಡಿಸುವ ಪ್ರಯತ್ನ ನಡೆಸಬೇಕಿದೆ. ಕಾನೂನಿನ ಚೌಕಟ್ಟಿನೊಳಗೆ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯಾಧ್ಯಕ್ಷನಾಗಿ ಪ್ರಯತ್ನಿಸುವೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಿ ಸರಕಾರದ ಜತೆಗೂ ಸಂಪರ್ಕ ಸಾಧಿಸಿ ಯಾವುದೇ ಲೋಪದೋಷಗಳಾಗದಂತೆ ಕಾನೂನಿನ ಚೌಕಟ್ಟು ಮುರಿಯದಂತೆ ಕಾರ್‍ಯನಿರ್ವಹಿಸಲು ಬದ್ಧ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!