| ಮಂಗಳೂರು ಅ.23 (ಉಡುಪಿ ಟೈಮ್ಸ್ ವರದಿ): ದ.ಕ ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಆರಂಭಗೊಂಡಿದ್ದು, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಶರವು ಮಹಾಗಣಪತಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಹಿನ್ನೆಲೆ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ಅಧಿಸೂಚನೆ ಹೊರಡಿಸಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶರವು ಮಹಾಗಣಪತಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧದ ಆದೇಶ ಹೊರಡಿಸುವುದರ ಜೊತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ. ಅದರಂತೆ, ಕಾಮಗಾರಿ ಪ್ರಾರಂಭ ಮತ್ತು ಮುಗಿಸುವ ದಿನಾಂಕ, ಕಾಮಗಾರಿ ನಡೆಸುವ ಉಸ್ತುವಾರಿ ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ರವರ ಹೆಸರು ಮತ್ತು ಮೊಬೈಲ್ ದೂರವಾಣಿ ಸಂಖ್ಯೆ ಇರುವ ಫಲಕವನ್ನು ಕಾಮಗಾರಿ ನಡೆಯುವ ಸ್ಥಳದಲ್ಲಿ ಅಳವಡಿಸಬೇಕು ಕಾಮಗಾರಿ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್/ಡೈವರ್ಶನ್ ಬೋರ್ಡ್ ಗಳನ್ನು ಅಳವಡಿಸಬೇಕು.
ಕಾಮಗಾರಿ ನಡೆಯುವ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ನಿರ್ದೇಶಿಸಿರುವ ರಸ್ತೆ ಕಾಮಗಾರಿ ವೇಳೆ ಕೈಗೊಳ್ಳಬೇಕಾಗಿರುವ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ. ಈ ಎಲ್ಲಾ ಷರತ್ತುಗಳಿಗೆ ಒಳಪಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲು 60 ದಿನಗಳ ಕಾಲ ಈ ಮಾರ್ಗದಲ್ಲಿ ತಾತ್ಕಾಲಿಕ ವಾಹನ ಸಂಚಾರ ನಿಷೇಧಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶರವು ವಿಮಲೇಶ್ ಜಂಕ್ಷನ್ ನಿಂದ ಕೆ.ಎಸ್.ಆರ್ ಜಂಕ್ಷನ್ ವರೆಗಿನ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಕೆ.ಎಸ್.ಆರ್ ರಸ್ತೆಯಿಂದ ಪಿ.ಎಂ ರಾವ್ ರಸ್ತೆ ಮೂಲಕ ಗಣಪತಿ ಹೈಸ್ಕೂಲ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ವಾಹನಗಳು ನೇರವಾಗಿ ಹಂಪನಕಟ್ಟೆ ಜಂಕ್ಷನ್ ಮೂಲಕ ಸಂಚರಿಸ ಬಹುದಾಗಿದೆ. ಕೆ.ಬಿ ಕಟ್ಟೆ ಜಂಕ್ಷನ್ ಗಣಪತಿ ಹೈಸ್ಕೂಲ್ ರಸ್ತೆ ಶರವು ದೇವಸ್ಥಾನ ರಸ್ತೆಯ ಮೂಲಕ ಕೆ.ಎಸ್. ಆರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಪಿ ಎಂ ರಾವ್ ರಸ್ತೆಯ ಮೂಲಕ ಕೆ.ಎಸ್.ಆರ್ ರಸ್ತೆ ಕಡೆಗೆ ಸಂಚರಿಸಬೇಕಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಅಧಿಸೂಚನೆಯು ಅ.24 ರಿಂದ ಡಿ.23 ರ ವರೆಗೆ 60 ದಿನಗಳ ಕಾಲ ಅನ್ವಯ ವಾಗಲಿದೆ ಎಂದು ಆಧಿಸೂಚನೆಯಲ್ಲಿ ತಿಳಿಸಲಾಗಿದೆ.
| |