ಉಡುಪಿ: ವಿಮಾ ನೌಕರರ ಸಂಘ ಸ್ಥಾಪಕ ಸದಸ್ಯ ಬಿ.ಆರ್.ವಿ ಕಾಮತ್ ಇನ್ನಿಲ್ಲ
ಉಡುಪಿ: ವಿಮಾ ನೌಕರರ ಸಂಘ ಉಡುಪಿ ವಿಭಾಗದ ಸ್ಥಾಪಕ ಸದಸ್ಯರಲ್ಲೊಬ್ಬರು, ಹಿರಿಯ ನಾಯಕ ಬಿ.ಆರ್.ವಿ ಯೆಂದೇ ಹೆಸರುವಾಸಿಯಾಗಿದ್ದ ಬಾರ್ಕೂರು ರತ್ನಾಕರ ವಾಮನರಾಯ ಕಾಮತ್ ಇಂದು ನಿಧನರಾಗಿದ್ದಾರೆ.
1956 ರಲ್ಲಿ ಜೀವ ವಿಮಾ ಉದ್ಯಮದ ರಾಷ್ಟ್ರೀಕರಣವಾಗಿ ಉಡುಪಿಯಲ್ಲಿ ವಿಮಾ ನೌಕರರ ಸಂಘ ಸ್ಥಾಪನೆಯಾದಾಗ ಕಾಮತರು ಅದರ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ನಾಲ್ಕು ದಶಕಗಳ ಅವರ ಸೇವಾವಧಿಯಲ್ಲಿ ವಿಮಾ ನೌಕರರರ ಸಂಘ, ಉಡುಪಿ ವಿಭಾಗದ ಕಾರ್ಯಕಾರೀ ಸಮಿತಿಯ ಸದಸ್ಯರಾಗಿ, ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿ ಎರಡು ದಶಕಗಳ ಕಾಲಾವಧಿಯಲ್ಲಿ ಸಂಘಟನೆಯ ಬೆಳವಣಿಗೆಗೆ ಸಕ್ರಿಯವಾಗಿ ಅವರು ದುಡಿದಿದ್ದಾರೆ. 11974 ರಲ್ಲಿ ಎಲ್.ಐ.ಸಿ ಯ ಲಾಕೌಟ್ ಮತ್ತು ದಬ್ಬಾಳಿಕೆಯ ನೀತಿಯನ್ನು ಪ್ರತಿಭಟಿಸಿ ದೇಶಾದ್ಯಂತ ನೂರಾರು ಕಾರ್ಯಕರ್ತರು ಮತ್ತು ಉಡುಪಿ ವಿಭಾಗದಲ್ಲಿ ಅಮಾನತುಗೊಂಡು ಮತ್ತೆ ಸೇವೆಗೆ ನಿಯುಕ್ತಿಗೊಂಡ ಐವರು ಉದ್ಯೋಗಿಳಲ್ಲಿ ಬಿ.ಆರ್.ವಿ ಕಾಮತರು ಒಬ್ಬರಾಗಿದ್ದರು.
ಎಲ್.ಐ.ಸಿ ಯಲ್ಲಿ ಹೊಸದಾಗಿ ಕೆಲಸಕ್ಕೆ ಬರುವ ಅಭ್ಯರ್ಥಿಗಳಿಗೆ ಅವರು ನೀಡಿದ ನೆರವು, ಮಾರ್ಗದರ್ಶನ ಮತ್ತು ಅವರು ತೋರಿಸಿದ ಪ್ರೀತಿ ವಾತ್ಸಲ್ಯಕ್ಕೆ ಪಾರವೇ ಇಲ್ಲ. ಸಂಕಟದಲ್ಲಿರುವವರಿಗೆ ತಾನು ನೆರವು ನೀಡುವುದರೊಂದಿಗೆ ಇತರರಿಂದಲೂ ನೆರವು ಕೊಡಿಸುವುದರಲ್ಲಾಗಲಿ, ಸುಮಾರು 50 ಕ್ಕಿಂತಲೂ ಹೆಚ್ಚು ಸಲ ಸ್ವತ: ರಕ್ತದಾನ ಮಾಡಿದುದಲ್ಲದೆ, ರಕ್ತದಾನ ಶಿಬಿರವನ್ನೂ ಆಯೋಜಿಸುವುದರಲ್ಲಿ ಬಿ.ಆರ್.ವಿ ಕಾಮತರದ್ದು ಎತ್ತಿದ ಕೈಯಾಗಿತ್ತು. ನಿವೃತ್ತಿಯ ನಂತರವೂ ವಿಮಾ ಪಿಂಚಣಿದಾರರ ಸಂಘ, ಉಡುಪಿ ವಿಭಾಗವನ್ನು ಸಂಘಟಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಘಟನೆಯ ಮೊದಲ ಖಜಾಂಚಿಯಾಗಿದ್ದು ಮಾತ್ರವಲ್ಲ ಹಲವು ವರ್ಷಗಳ ಕಾಲ ಕಾರ್ಯಕಾರೀ ಸಮಿತಿಯ ಸಕ್ರಿಯ ಸದಸ್ಯರಾಗಿದ್ದು ಸಂಘಟನೆಯ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.