ದೀಪಕ್ ರಾವ್ ಸ್ಮರಣಾರ್ಥ ಬಸ್ ನಿಲ್ಡಾಣಕ್ಕೆ ವಿರೋಧ- ಕೊಲೆ ಬೆದರಿಕೆ ಒಡ್ಡಿದ ಐವರ ಬಂಧನ
ಮಂಗಳೂರು, ಅ 23: ದೀಪಕ್ ರಾವ್ ಸವಿನೆನಪಿಗಾಗಿ ನಿರ್ಮಿಸಿದ ಬಸ್ ನಿಲ್ದಾಣದ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಕೊಲೆ ಮಾಡುವುದಾಗಿ ವಾಟ್ಸ್ ಆಪ್ ಗ್ರೂಪಿನಲ್ಲಿ ವಾಯ್ಸ್ ಮೆಸೇಜ್‌ನಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಕಾಟಿಪಳ್ಳದ 2ನೇ ಬ್ಲಾಕ್ ನಿವಾಸಿ ಮುಹಮ್ಮದ್ ನವಾಝ್ ಯಾನೆ ಪಿಂಕಿ ನವಾಝ್ (25), ಜೋಕಟ್ಟೆಯ ಮುಹಮ್ಮದ್ ಫೈಝಲ್ (21), ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಮುಹಮ್ಮದ್ ಸಫ್ವಾನ್ (23), ಕಾಟಿಪಳ್ಳ 6ನೇ ಬ್ಲಾಕ್ ನಿವಾಸಿ ಮುಹಮ್ಮದ್ ನಿಯಾಝ್ (20), ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಮುಸ್ತಫಾ (22) ಬಂಧಿತರು.
2018 ರಲ್ಲಿ ಕೊಲೆಯಾದ ದೀಪಕ್ ರಾವ್ ನೆನಪಿಗಾಗಿ ಕಾಟಿಪಳ್ಳದ 3ನೇ ಬ್ಲಾಕ್ ದ್ವಾರದ ಸಮೀಪದಲ್ಲಿ ಹೊಸದಾಗಿ ನಿರ್ಮಾಣ ಗೊಂಡ ಬಸ್ ನಿಲ್ದಾಣಕ್ಕೆ ದೀಪಕ್ ಹೆಸರು ನಾಮಕರಣಕ್ಕೆ ತೀರ್ಮಾನಿಸಿದ್ದರು. ಅದರಂತೆ, ಬಸ್ ನಿಲ್ದಾಣವನ್ನು ಶಾಸಕ ಭರತ್ ಶೆಟ್ಟಿ ಉದ್ಘಾಟಿಸಿದ್ದರು. ಇದಾದ ಬಳಿಕ ‘ಲೋಕಂದವಾಲಾ’ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ ಪಿಂಕಿ ನವಾಝ್ ಹಾಗೂ ಜುನ್ನಿ ಎಂಬಾತನ ನಡುವಿನ ಸಂಭಾಷಣೆಯದ್ದು ಎನ್ನಲಾದ ಆಡಿಯೊ ತುಣುಕನ್ನು ಹಂಚಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳನ್ನು ಕೊಲೆ ಮಾಡುತ್ತೇವೆ’ ಎನ್ನುವುದು ಆಡಿಯೊದಲ್ಲಿತ್ತು. ಇದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಟಿಪಳ್ಳದ ಲೋಕೇಶ್ ಎಂಬವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಐವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ ತಲವಾರು, ನಾಲ್ಕು ಮೊಬೈಲ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದೆ.