| ಶಿವಮೊಗ್ಗ, ಅ.22: ಕಾಮಗಾರಿಯ ಬಿಲ್ ಮೊತ್ತವನ್ನು ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಶಿವಮೊಗ್ಗದ ಮುದ್ದಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇಣಿ ಕಣ್ಣನ್ (47) ಎಸಿಬಿ ಬಲೆಗೆ ಬಿದ್ದವರು.
ಮುದ್ದಿನಕೊಪ್ಪ ಗ್ರಾಮದ ನಿವಾಸಿಯೊಬ್ಬರು ಗುತ್ತಿಗೆದಾರರೊಬ್ಬರ ಪರವಾಗಿ ಕಟ್ಟಡ ಕಾಮಗಾರಿಯೊಂದನ್ನು ಪೂರ್ಣಗೊಳಿಸಿದ್ದು, ಈ ಕಾಮಗಾರಿ 2020ರ ಜನವರಿಯಲ್ಲೇ ಮುಕ್ತಾಯವಾಗಿತ್ತು. ಈ ಕಾಮಗಾರಿಯ ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು 50 ಸಾವಿರ ರೂ. ಕೊಡುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇಣಿ ಕಣ್ಣನ್ ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು 25 ಸಾವಿರ ರೂ.ಹಣ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮುದ್ದಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇಣಿ ಕಣ್ಣನ್ ರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. | |