ಉಡುಪಿ, ದ.ಕ ಸಹಿತ 12 ಜಿಲ್ಲೆಯಲ್ಲಿ ಮತ್ತೆ ‘ಲಾಕ್‌ಡೌನ್‌’?

ಬೆಂಗಳೂರು: ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ ಬೆನ್ನಲ್ಲೇ, ಸೋಂಕು ಹರಡುವಿಕೆ ಏರುಗತಿಯಲ್ಲಿರುವ ಜಿಲ್ಲೆಗಳಲ್ಲೂ ಲಾಕ್‌ಡೌನ್‌ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ.

ರಾಜ್ಯದಲ್ಲಿನ ಕೋವಿಡ್‌– 19 ಪರಿಸ್ಥಿತಿಯ ಕುರಿತು ತಮ್ಮ ನಿವಾಸ ‘ಕಾವೇರಿ’ಯಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಭಾನುವಾರ ಚರ್ಚಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸೋಂಕು ಹರಡುವಿಕೆ ನಿಯಂತ್ರಣ ಮತ್ತು ಸೋಂಕಿತರ ಆರೈಕೆಗೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ, ‘ರಾಜ್ಯದ 12 ಜಿಲ್ಲೆಗಳಲ್ಲಿ ಗಂಭೀರ ಪರಿಸ್ಥಿತಿ ಇದೆ. ಈ ಜಿಲ್ಲೆಗಳಲ್ಲಿಯೂ ಲಾಕ್‌ಡೌನ್‌ ಘೋಷಿಸುವ ಚಿಂತನೆ ನಡೆದಿದೆ. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಈ ಕುರಿತು ತೀರ್ಮಾನಿಸಲಿದ್ದಾರೆ’ ಎಂದರು.

‘ಕೊರೊನಾ ಸೋಂಕು ಹರಡುವಿಕೆ ತಡೆಯಲು ಸರಪಳಿಯನ್ನು ತುಂಡರಿಸಬೇಕಾಗಿದೆ. ಈ ಕಾರಣಕ್ಕೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸದ್ಯಕ್ಕೆ ಮಂಗಳವಾರ ರಾತ್ರಿ 8 ಗಂಟೆಯಿಂದ ಏಳು ದಿನ ಲಾಕ್‌ಡೌನ್ ಘೋಷಿಸಲಾಗಿದೆ. ಜನಸಾಮಾನ್ಯರಿಗೆ ತೊಂದರೆ ಆಗದಿರಲಿ, ಅಗತ್ಯ ವಸ್ತುಗಳನ್ನು ಖರೀದಿಸಿಕೊಳ್ಳಲಿ, ಬೇರೆ ಬೇರೆ ಊರುಗಳಿಗೆ ಹೋಗುವವರಿಗೂ ಅನುಕೂಲವಾಗಲಿ ಎಂದು ಸೋಮವಾರ ಬಿಡುವು ನೀಡಲಾಗಿದೆ. ಬೇರೆ ಬೇರೆ ಸ್ಥಳಗಳಿಗೆ ಹೋಗಬೇಕಾದವರು ಸೋಮವಾರವೇ ಹೊರಟುಬಿಡಿ’ ಎಂದೂ ಅಶೋಕ ಸಲಹೆ ನೀಡಿದರು.

‘ಲಾಕ್‌ಡೌನ್ ಕುರಿತು ಮಾರ್ಗಸೂಚಿಯನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ಈ ಅವಧಿಯಲ್ಲಿ ವೈದ್ಯಕೀಯ ಉಪಕರಣಗಳು, ಔಷಧಿ ತಯಾರಿಕೆಗೆ ಸಂಬಂಧಿಸಿದ ಉದ್ಯಮಗಳನ್ನು ತೆರೆಯಲು ಅವಕಾಶ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಸೋಂಕು ಹರಡುವಿಕೆ ವೇಗ ಯಾವ ರೀತಿ ಕಡಿಮೆ ಆಗುತ್ತದೆ ಎಂಬುದನ್ನು ನೋಡಿಕೊಂಡು ಅವಧಿಯನ್ನು ವಿಸ್ತರಿಸಬೇಕೊ, ಬೇಡವೊ ಎಂದು ನಿರ್ಧರಿಸುತ್ತೇವೆ. ತಜ್ಞರಿಂದ ಕೂಡಾ ವರದಿ ಪಡೆದು ಎರಡು ದಿನಗಳ ಮೊದಲೇ ತಿಳಿಸುತ್ತೇವೆ’ ಎಂದರು.

‘ಕೋವಿಡ್–‌ 19 ಸಂಬಂಧಿಸಿದಂತೆ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಜಿಲ್ಲಾಧಿಕಾರಿಗಳ ಜೊತೆ ಈ ಕುರಿತು ಮುಖ್ಯಮಂತ್ರಿ ಚರ್ಚಿಸಲಿದ್ದಾರೆ. ಸೋಂಕು ದೃಢಪಟ್ಟ ಜಿಲ್ಲೆಗಳಲ್ಲಿ ಸೀಲ್‌ಡೌನ್ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳಿಗೆ, ಕಡಿಮೆ ಪ್ರಕರಣ ಇರುವ ಜಿಲ್ಲೆಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು’ ಎಂದೂ ಅವರು ಹೇಳಿದರು.

‘ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸಮಸ್ಯೆ ಇದೆ. ಆದರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳ ಹಾಸಿಗೆ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಿದರೆ ಬೆಂಗಳೂರಿನಲ್ಲಿ ಹಾಸಿಗೆ ಸಮಸ್ಯೆ ನಿವಾರಣೆ ಆಗಲಿದೆ. ಮಾನವೀಯತೆಯಿಂದ ಸಹಾಯ ಮಾಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದೇವೆ’ ಎಂದರು.

‘ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರಬೇಕು ಎಂದು ಸರ್ಕಾರದ ಪರವಾಗಿ ಜನರಲ್ಲಿ ನಾನು ಕೈ ಮುಗಿದು ವಿನಂತಿ ಮಾಡುತ್ತೇನೆ’ ಎಂದೂ ಹೇಳಿದರು.

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ತಮ್ಮ ನಿವಾಸ ‘ಕಾವೇರಿ’ಯಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಂದು ವಿಡಿಯೊ ಸಂವಾದ ನಡೆಸಲಿದ್ದಾರೆ.

ಸೋಂಕು ಪ್ರಕರಣಗಳು ಹೆಚ್ಚಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್‌, ಧಾರವಾಡ, ರಾಯಚೂರು ಮತ್ತು ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಬೆಳಿಗ್ಗೆ 11 ಗಂಟೆಗೆ ಹಾಗೂ ಉಳಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂಜೆ 4 ಗಂಟೆಗೆ ಈ ಸಂವಾದ ನಡೆಯಲಿದೆ.

ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 14ರಿಂದ 22ರವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ. ಸೋಂಕು ಹೆಚ್ಚು ಪತ್ತೆಯಾಗುತ್ತಿರುವ ಜಿಲ್ಲೆಗಳಲ್ಲಿಯೂ ಲಾಕ್‌ಡೌನ್‌ ಘೋಷಿಸಲು ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೊ ಸಂವಾದ ಮಹತ್ವ ಪಡೆದಿದೆ.

ಇದೇ ವೇಳೆ, ಮುಂಗಾರು ಮಳೆ ಪರಿಸ್ಥಿತಿ ಮತ್ತು ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ವಿಚಾರ ವಿನಿಮಯ ನಡೆಸಲಿದ್ದಾರೆ. ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳೂ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!