ಉಡುಪಿ: ನಗರದಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ 10,000 ರೂ. ದಂಡ ವಸೂಲಿ
ಉಡುಪಿ ಅ.22 (ಉಡುಪಿ ಟೈಮ್ಸ್ ವರದಿ): ನಗರದಲ್ಲಿ ಅಲ್ಲಲ್ಲಿ ಕೆಲವು ಕಡೆ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತಿರುವ ಹಿನ್ನೆಲೆ ಮನ ಬಂದಂತೆ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ನಗರ ಸಭೆ ವತಿಯಿಂದ ದಂಡ ವಿಧಿಸಲಾಗುತ್ತಿದೆ.
ಇದೀಗ ಈ ಕಾರ್ಯದ ಮುಂದುವರಿದ ಭಾಗವಾಗಿ ನಿನ್ನೆ ರಾತ್ರಿ ನಗರಸಭೆ ವ್ಯಾಪ್ತಿಯ ಕರಾವಳಿ ಬೈಪಾಸ್ ಮತ್ತು ಕಡಿಯಾಳಿ ವಾರ್ಡಿನ ಎಂಜಿಎಂ ಹಿಂಭಾಗದ ರಸ್ತೆಯಲ್ಲಿ ತ್ಯಾಜ್ಯ ಹಾಕಿದವರನ್ನು ಪತ್ತೆ ಹಚ್ಚಿ ತಲಾ 5000 ರೂ. ದಂಡ ವಿಧಿಸಲಾಗಿದೆ.
ನಗರವನ್ನು ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ನಗರ ಸಭೆ ಈಗಾಗಲೇ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ಸೂಚನೆ ನೀಡಿದ್ದು, ಒಂದು ವೇಳೆ ತ್ಯಾಜ್ಯಗಳನ್ನು ಎಸೆಯುವುದು ಕಂಡು ಬಂದರೆ ಅಂತವರಿಗೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ನಗರ ಸಭೆಯ ಎಚ್ಚರಿಕೆಯ ಸಂದೇಶದ ಹೊರತಾಗಿಯೂ ನಗರದಲ್ಲಿ ಎಲ್ಲೆಂದರಲ್ಲಿ ಕಸ ಕಾಣ ಸಿಗುತ್ತಿದೆ. ಹಾಗಾಗಿ ಇದೀಗ ಈ ರೀತಿ ಕಸ ಎಸೆಯುವವರನ್ನು ಪತ್ತೆ ಹಚ್ಚಿದ ನಗರ ಸಭೆ ಕರಾವಳಿ ಬೈಪಾಸ್ ಮತ್ತು ಕಡಿಯಾಳಿ ವಾರ್ಡಿನ ಎಂಜಿಎಂ ಹಿಂಭಾಗದ ರಸ್ತೆಯಲ್ಲಿ ಕಸ ಎಸೆದವರಿಂದ 10,000 ರೂ ದಂಡ ವಸೂಲಿ ಮಾಡಿದೆ.