ಬಿಜೆಪಿ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಸಂಘಪರಿವಾರದ ಮೂಲಕ ಸಾಮಾಜಿಕ ಭಯೋತ್ಪದನೆ- ಅಶೋಕ ಕೊಡವೂರು
ಉಡುಪಿ: ಸಂಘ ಪರಿವಾರ ಹಮ್ಮಿಕೊಂಡ ತ್ರಿಶೂಲ ದೀಕ್ಷೆಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯನವರೆ ಮೊದಲ ಬಲಿಯಾಗಲಿದ್ದಾರೆ ಎಂದು ರಾಜಾರೋಷವಾಗಿ ಬೆದರಿಕೆಯೊಡ್ಡಿದ ಹಿಂದೂ ಜಾಗರಣಾವೇದಿಕೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿಫಲರಾದ ಮತ್ತು ತನ್ನದೇ ಇಲಾಖೆಯ ಕಾರ್ಯಕ್ರಮದಲ್ಲಿ ಪೊಲೀಸರು ಖಾಕಿ ಕಳಚಿಕೇಸರಿ ತೊಡಲು ಪ್ರಚೋದನೆ ನೀಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ತನ್ನ ಕರ್ತವ್ಯ ಚ್ಯುತಿಯಿಂದುಂಟಾದ ಸಾಂವಿಧಾನಿಕ ನಡೆಯ ಉಲ್ಲಂಘನೆಯ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.
ಕರಾವಳಿ ಭಾಗದಲ್ಲಿ ಅನೈತಿಕ ಪೊಲೀಸ್ ಗಿರಿ ಅವ್ಯಾಹತವಾಗಿ ನಡೆಯುತ್ತಿದ್ದು ಗಂಡು ಹೆಣ್ಣು ಒಟ್ಟಾಗಿ ತಿರುಗಾಡದಂತಹ ಅಮಾನವೀಯ ಪರಿಸ್ಥಿತಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇದು ತಾಲೀಬಾನ್ ಸಂಸ್ಕೃತಿಯಾಗಿ ರೂಪಗೊಳ್ಳದಂತೆ ತಡೆಯ ಬೇಕಾಗಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ವ್ಯಾಖ್ಯಾನಿಸಿ ಇದಕ್ಕೆ ಪರೋಕ್ಷ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಹೇಳಿದೆ. ಕೇಸರಿ ಮತ್ತು ತ್ರಿಶೂಲ ತ್ಯಾಗ ಪರಿತ್ಯಾಗ, ಶಾಂತಿ ಸೌಹಾರ್ದತೆಯ ಸಂಕೇತ. ಆದರೆ ಬಿಜೆಪಿ ಇದನ್ನು ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಸಂಘಪರಿವಾರದ ಮೂಲಕ ಸಾಮಾಜಿಕ ಭಯೋತ್ಪದನೆಗೆ ಬಳಸಿಕೊಳ್ಳುತ್ತಿದೆ. ಇದು ಹಿಂದೂ ಆಸ್ಮಿತೆಗೆ ಮಾಡಿದ ಮಹಾಮೋಸ. ಮುಂದೊಂದು ದಿನ ಸ್ವಯಂ ಬಿಜೆಪಿಯೇ ಇದಕ್ಕೆ ಬಲಿಯಾಗಿ ದೇಶದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.