ಯಾರು ಯಾರೊಂದಿಗೆ ಇರಬೇಕು ಎನ್ನುವುದು ಅವರವರ ಸ್ವಂತ ನಿರ್ಧಾರ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ಅಮೃತ್ ಶೆಣೈ

ಉಡುಪಿ ಅ.21 (ಉಡುಪಿ ಟೈಮ್ಸ್ ವರದಿ): ಮುಖ್ಯಮಂತ್ರಿಗಳು ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಮಾತನಾಡಿರುತ್ತಾರೆ ಎಂದು ಆರೋಪಿಸಿ ಸಹಬಾಳ್ವೆ ಉಡುಪಿ ಜಿಲ್ಲೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾಕಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರಕಾರ ಹಾಗೂ ಹಿಂದೂ ಜಾಗರಣ ವೇದಿಕೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ವೇಳೆ ಸಹಬಾಳ್ವೆ ಮುಖಂಡ ಅಮೃತ್ ಶೆಣೈ ಅವರು ಮಾತನಾಡಿ, ಸ್ವತಂತ್ರ ಭಾರತದಲ್ಲಿ ಯಾರು ಯಾರೊಂದಿಗೆ ಇರಬೇಕು ಎನ್ನುವುದು ಅವರವರ ಸ್ವಂತ ನಿರ್ಧಾರವಾಗಿದ್ದು ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ವಿದ್ಯಾರ್ಥಿಗಳು ಒಟ್ಟಿಗೆ ಪ್ರಯಾಣಿಸುವುದು, ತಿರುಗುವುದು ಅಪರಾಧವಲ್ಲ. ಅದು ಅವರ ಹಕ್ಕು. ಆದರೆ ಇತ್ತೀಚೆಗೆ ಒಟ್ಟಿಗೆ ತಿರುಗುವ ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಿ ದಾಂಧಲೆ ನಡೆಸುತ್ತಿರುವ ಘಟನೆಗಳೇ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
 
ಪ್ರತಿಭಟನೆ ಬಳಿಕ ಜಿಲ್ಲಾ ಯೋಜನಾಧಿಕಾರಿ ಜಿಲ್ಲಾಧಿಕಾರಿ ಪ್ರತಿಭಾರವರ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕೋಮುಸೌಹಾರ್ದ ವೇದಿಕೆ ಉಡುಪಿ ಜಿಲ್ಲೆ ಇದರ ಮುಖಂಡ ಹುಸೇನ್ ಕೋಡಿಬೆಂಗ್ರೆ, ಡಿ.ಎಸ್.ಎಸ್ ಮುಖಂಡ ಸುಂದರ್ ಮಾಸ್ಟರ್, ಕಾಂಗ್ರೆಸ್ ನಾಗೇಶ್ ಉದ್ಯಾವರ, ಮುಸ್ಲಿಂ ಒಕ್ಕೂಟದ ಸದಸ್ಯ ಇದಿನಬ್ಬ, ಮುಸ್ಲಿಂ ಒಕ್ಕೂಟದ ಮುಖಂಡ ಯಾಸೀನ್ ಮಲ್ಪೆ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!