ಓಡಿಹೋಗುವ ಎಂದ ಗೃಹಿಣಿಯನ್ನೇ ಇರಿದು ಕೊಂದ ಪಿಯುಸಿ ಹುಡುಗ
ಬೆಂಗಳೂರು: ಮಹಾನಗರದಲ್ಲಿ ಇಂದು ಬೆಳಗ್ಗೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ದೊಡ್ಡದೊಂದು ತಿರುವು ಸಿಕ್ಕಿದೆ. ಯಾರೂ ಊಹಿಸಿರದ, ಯಾರೂ ಸಂಶಯಿಸಿರದವನೊಬ್ಬ ಕೊಲೆ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಫ್ರೀನ್ ಖಾನ್ ಕೊಲೆಯಾದವರು. ಇವರ ಪತಿ ಲಾಲು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಈ ಕೃತ್ಯ ನಡೆದಿತ್ತು. ನಿನ್ನೆ ಲಾಲು ಕೆಲಸದ ಮೇಲೆ ಹೊರಗೆ ಹೋಗಿದ್ದರು. ನಗರದ ಟಿಂಬರ್ ಯಾರ್ಡ್ ನಲ್ಲಿ ಕೆಲಸ ಮಾಡುವ ಇವರು ಮರುದಿನ ಸಂಜೆ ಬಂದು ನೋಡಿದಾಗ ಮನೆಗೆ ಬೀಗ ಹಾಕಿತ್ತು. ಒಳಗಿನಿಂದ ಸುಟ್ಟ ವಾಸನೆ ಬರುತ್ತಿದ್ದರಿಂದ ಬೀಗ ಒಡೆದು ಒಳ ಹೋದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಆಕೆಯ ಜೀವ ಹೋಗಿರುವುದು ತಿಳಿದಿದೆ.
ಈ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ ತನಿಖಾ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಚೂಪಾದ ವಸ್ತುವಿನಿಂದ ಕುತ್ತಿಗೆಗೆ ತಿವಿದಿರುವುದು ಗೊತ್ತಾಗಿದೆ. ಮೊದಲಿಗೆ ಲಾಲು ಮೇಲೆಯೇ ಸಂಶಯಗೊಂಡ ಪೊಲೀಸರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಆತ ನಿನ್ನೆ ರಾತ್ರಿ ಮನೆಯಲ್ಲಿ ಇಲ್ಲದಿರುವುದು, ಇಂದು ಬೆಳಗ್ಗೆ ಕೆಲಸದಲ್ಲಿದ್ದಾಗ ಐದು ಪೋನ್ ಕರೆಗಳನ್ನು ಸ್ವೀಕರಿಸಿರುವುದು ಗೊತ್ತಾಗಿದೆ.
ಆಫ್ರೀನ್ ಖಾನ್ ಬಳಸುತ್ತಿದ್ದ ಮೊಬೈಲ್ ಪೋನ್ ಕರೆ ವಿವರವನ್ನು ಚೆಕ್ ಮಾಡಿದ್ದಾರೆ. ಆಗ ಆಕೆ ಪದೇಪದೇ ಓರ್ವ ವ್ಯಕ್ತಿಗೆ ಕರೆ ಮಾಡಿರುವುದು, ಮೆಸೇಜ್ ಮಾಡಿರುವುದು ಗೊತ್ತಾಗಿದೆ. ಅದು ಅಪ್ರಾಪ್ತ ಬಾಲಕ ಎಂದು ಗೊತ್ತಾಗಿದೆ. ಕೂಡಲೇ ಪೊಲೀಸರು ಬಾಲಕನನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯದ ವಿವರಗಳು ಬಯಲಾಗಿವೆ. ಈತ ಮತ್ತು ಆಫ್ರೀನ್ ಖಾನ್ ಒಂದು ವರ್ಷದ ಹಿಂದಿನಿಂದಲೂ ಪ್ರೀತಿಸುತ್ತಿದ್ದರು. ಕೊಲೆ ನಡೆದ ದಿನ ಅಫ್ರೀನ್ ತನ್ನ ಮಕ್ಕಳನ್ನು ತನ್ನ ತಾಯಿಯ ಮನೆಗೆ ಕಳಿಸಿದ್ದಳು. ಬಳಿಕ ಬಾಲಕನ್ನು ಕರೆಸಿಕೊಂಡಿದ್ದಳು.
ಆತ ಬಂದ ಮೇಲೆ ಎಲ್ಲಿಯಾದರೂ ಓಡಿ ಹೋಗೋಣ ಎಂಬ ಪ್ರಸ್ತಾಪ ಇಟ್ಟಿದ್ದಾರೆ. ದ್ವೀತಿಯ ಪಿಯುಸಿ ಓದುತ್ತಿದ್ದ ಬಾಲಕ ಈ ರೀತಿ ಮಾಡಿದರೆ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿ ನಿರಾಕರಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳವಾಗಿ ಆತ ಅಡುಗೆ ಮನೆಯಿಂದ ಕತ್ತರಿ ತಂದು ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ನಂತರ ಬಟ್ಟೆಗೆ ಬೆಂಕಿ ಹಚ್ಚಿ ಆಕೆ ಮೇಲೆ ಎಸೆದು ಹೊರಗೆ ಬಂದು ಬಾಗಿಲಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಅಪ್ರಾಪ್ತ ಬಾಲಕನನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.