ಅಕ್ಷರ ಸಂತ ಹಾಜಬ್ಬರಿಗೆ ನ.8 ರಂದು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರ

ಮಂಗಳೂರು ಅ.21: 2020ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಅಕ್ಷರ ಸಂತ ಎಂಬ ಬಿರುದಿನಿಂದ ನಾಮಾಂಕಿತಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಜಬ್ಬರನ್ನು ಆಯ್ಕೆ ಮಾಡಲಾಗಿದೆ. ದೆಹಲಿಯಲ್ಲಿ ನ.8 ರಂದು ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.  

ಇವರ ಸೇವೆಯಲ್ಲಿ ಗುರುತಿಸಿ ಈ ಹಿಂದೆಯೇ 2020ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದರೆ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನವಾಗದೇಕಿತ್ತು. ಆದರೆ, ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಬ ಮುಂದೂಡಲ್ಪಟ್ಟಿತ್ತು.

ಇದೀಗ ಮುಂದಿನ ನವಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರಧಾನಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ನವದೆಹಲಿಗೆ ಆಗಮಿಸುವಂತೆ ಹರೇಕಳ ಹಾಜಬ್ಬಗೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಸಹಾಯಕ ಜೊತೆ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ನ. 8 ರಂದು ದೆಹಲಿಗೆ ತಲುಪಿ ಅಲ್ಲಿನ ಅಶೋಕ್ ಹೋಟೆಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಗೌರವ ಸ್ವೀಕರಿಸಲಿದ್ದಾರೆ.

ಬಡತನದಿಂದ ಶಿಕ್ಷಣದಿಂದ ವಂಚಿತರಾದ ಹರೇಕಳ ಹಾಜಬ್ಬ ತನ್ನೂರಿನ ಮಕ್ಕಳಿಗೆ ಶಾಲೆ ಕಟ್ಟಿಸಬೇಕೆಂದು ಹಠ ತೊಟ್ಟರು. ಮಂಗಳೂರಿನ ರಸ್ತೆಗಳಲ್ಲಿ ಕಿತ್ತಳೆ ಹಣ್ಣು ಮಾರುತ್ತಾ, ಅದರಿಂದ ಬಂದ ಹಣವನ್ನು ಕೂಡಿಟ್ಟು ಶಾಲೆಯೊಂದನ್ನು ಕಟ್ಟಿಸಿದರು. ಈ ಮೂಲಕ ಹಳ್ಳಿಯ ಬಡ ವ್ಯಕ್ತಿಯೊಬ್ಬರು ಮಂಗಳೂರು ವಿಶ್ವವಿದ್ಯಾನಿಲಯ,ಹಂಪಿ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಕೇರಳದ ಕನ್ನಡ ಶಾಲೆಯ ಪಠ್ಯದ ವಿಷಯದ ಎತ್ತರಕ್ಕೆ ಬೆಳೆದು, ಅಕ್ಷರ ಸಂತನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ಸರಕಾರಿ ಪದವಿ ಪೂರ್ವ ಕಾಲೇಜು, ಐಟಿಐ ಆರಂಭಿಸುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದಣಿಯದೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅನಾರೋಗ್ಯ, ವೈಯಕ್ತಿಕ ಸಮಸ್ಯೆಗಳ ನಡುವೆಯೂ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಉತ್ಸಾಹದಿಂದ ಶ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!