ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ನರ್ಸಿಂಗ್ ವಿಭಾಗಕ್ಕೆ ಶ್ರೇಷ್ಠತಾ ಪ್ರಮಾಣಪತ್ರ

ಮಣಿಪಾಲ, ಅ21: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಶುಶ್ರೂಷಾ (ನರ್ಸಿಂಗ್) ವಿಭಾಗಕ್ಕೆ ಶ್ರೇಷ್ಠತಾ (ಎಕ್ಸಲೆನ್ಸ್) ಪ್ರಮಾಣಪತ್ರವು ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕದಾರರ ಮಾನ್ಯತೆ ಪಡೆದ ಸಂಘ (ಎನ್’ಎಬಿಎಚ್), ಭಾರತೀಯ ಗುಣಮಟ್ಟದ ಮಂಡಳಿ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ) ಯಿಂದ ದೊರೆತಿದೆ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನರ್ಸಿಂಗ್ ಸೇವೆಗಳ ವಿಭಾಗದ ಮುಖ್ಯಸ್ಥರಾದ ಡಾ. ಶುಭ ಸೂರಿಯ ಇವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಗುಣಮಟ್ಟ ಅನುಷ್ಠಾನದ ಸಲಹೆಗಾರರಾದ ಡಾ.ಸುನೀಲ್ ಸಿ ಮುಂಡ್ಕೂರ್  ಮತ್ತು ಜಿಬು ಥೋಮಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಬಲ್ಲಾಳ್ ಅವರು, “ಎನ್ ಎಬಿಎಚ್ ನಿಂದ ಶುಶ್ರೂಷಾ ಶ್ರೇಷ್ಠತೆಗಾಗಿ ಗೌರವಿಸಲ್ಪಟ್ಟಿರುವುವುದು ಆಸ್ಪತ್ರೆಯ ನರ್ಸಿಂಗ್ ವಿಭಾಗದ ಗಣನೀಯ ಸಾಧನೆಯಾಗಿದೆ. ರೋಗಿಗಳಿಗೆ ಆರೈಕೆ ನೀಡುವಲ್ಲಿ ದಾದಿಯರು ನಿರ್ಣಾಯಕ ಪಾತ್ರ ವಹಿಸುತ್ತಿರುವುದರಿಂದ ಈ ಪ್ರಶಸ್ತಿಗೆ ಅವರು ಅರ್ಹರಾಗಿದ್ದಾರೆ” ಎಂದರು. 

ರೋಗಿಗಳ ಆರೈಕೆ, ರೋಗಿಗಳ ಶಿಕ್ಷಣ ಮತ್ತು ಜಾಗೃತಿ, ಶುಶ್ರೂಷಾ ಸಂಪನ್ಮೂಲ ನಿರ್ವಹಣೆ, ಶುಶ್ರೂಷೆಯ ಗುಣಮಟ್ಟ, ಸಂವಹನ, ಮಾರ್ಗದರ್ಶನ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳಂತಹ ಶುಶ್ರೂಷಾ ಆರೈಕಾ ವಿಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸೌಲಭ್ಯಗಳಿಗೆ ಪ್ರಮಾಣೀಕರಣವನ್ನು ನೀಡಲಾಗುತ್ತದೆ. ನರ್ಸಿಂಗ್ ಎಕ್ಸಲೆನ್ಸ್ ಎನ್ನುವುದು ಪ್ರತಿಷ್ಠಿತ ಪ್ರಮಾಣೀಕರಣ ಕಾರ್ಯಕ್ರಮವಾಗಿದ್ದು, ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಅಭಿವೃದ್ಧಿಪಡಿಸಿದೆ ಮತ್ತು ಜಾರಿಗೆ ತಂದಿದೆ. ಆರೋಗ್ಯ ಉತ್ತೇಜನ, ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸಕ ಶುಶ್ರೂಷಾ ಆರೈಕೆಯ ವಿಷಯದಲ್ಲಿ ಸಮಗ್ರ ಶುಶ್ರೂಷೆಯನ್ನು ಒದಗಿಸುವ ಗುರಿಯೊಂದಿಗೆ ಭಾರತದ ಗುಣಮಟ್ಟದ ಮಂಡಳಿಯು, ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೆ ಮತ್ತು ಸಮುದಾಯಕ್ಕೆ ಸಹಾನುಭೂತಿ, ಶ್ರೇಷ್ಟ ಸೌಕರ್ಯದೊಂದಿಗೆ ಸಮರ್ಥ ಮತ್ತು ನೈತಿಕ ಶುಶ್ರೂಷೆಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!