ವಿಶ್ವಶಾಂತಿಗಾಗಿ ಅ.17-ನ.17 ವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಅಭಿಯಾನ

ಕಾರ್ಕಳ ಅ.20 (ಉಡುಪಿ ಟೈಮ್ಸ್ ವರದಿ): ಶಾಂತಿಧೂತರಾದ ಪ್ರವಾದಿಯವರ ಸತ್ಯನುಡಿಗಳು ನಾಡಿನ ಜನರಿಗೆ ಅರಿವಾಗಬೇಕೆಂಬ ಉದ್ದೇಶದಿಂದ ಕಾರ್ಕಳದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮೀಲಾದ್ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಜಮಾಜತೆ ಇಸ್ಲಾಮಿ ಹಿಂದ್ ಕಾರ್ಕಳ ಘಟಕ ಅಧ್ಯಕ್ಷರಾದ ಮುಬೀನ್ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು ಜನರಲ್ಲಿ ಇಂದು ಇಸ್ಲಾಂ ಧರ್ಮವನ್ನು ದ್ವೇಷಿಸುವಂತೆ ಬಿಂಬಿಸುವ ಷಡ್ಯಂತಗಳು ವ್ಯಾಪಕವಾಗಿ ನಡೆಯುತ್ತಿದೆ. ಆದರೆ ಇಸ್ಲಾಂ ಏನು ಎಂಬ ಬಗ್ಗೆ, ಮುಸ್ಲಿಮರು ತಮ್ಮ ಬದುಕಿನ ರೀತಿಯ ಮೂಲಕ ತೋರಿಸಿಕೊಡಬೇಕಿದೆ. ಮಹಾತ್ಮಗಾಂಧಿ, ಬಸವಣ್ಣನವರು, ಶ್ರೀನಾರಾಯಣಗುರುಗಳು ಹೀಗೆ ಅನೇಕ ಮಹಾಪುರುಷರು ಬಯಸಿದ ಶಾಂತಿ, ಸಾಮರಸ್ಯದ ಬದುಕನ್ನೇ ಪ್ರವಾದಿಯವರು ಬಯಸಿದ್ದು, ಆ ಮೂಲಕ ವಿಶ್ವಶಾಂತಿಯೇ ನಮ್ಮೆಲ್ಲರ ಧೈಯವಾಗಬೇಕು.

ಈ ಕಾರಣದಿಂದಲೇ ಪ್ರವಾದಿಯವರ ಜನ್ಮದಿನ ಆಚರಣೆ ನಡೆಯುವ ರಬೀಉಲ್ ಅವ್ವಲ್ ಅರೇಬಿಕ್ ತಿಂಗಳಲ್ಲಿ ಅಂದರೆ ಅ.17 ರಿಂದ ನ.17 ರ ವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನದಲ್ಲಿ ನೈತಿಕ ಮೌಲ್ಯಗಳ ಪ್ರಚಾರ, ಪರಸ್ಪರ ಅರಿಯುವುದು, ಪ್ರವಾದಿ ವಚನಗಳು ಹಾಗೂ ಸಂದೇಶ ಪ್ರಚಾರ, ಪ್ರಬಂಧ ಸ್ಪರ್ಧೆ, ಶುಚಿತ್ವ ಅಭಿಯಾನ, ರಕ್ತದಾನ ಶಿಬಿರ, ಗಿಡ ನೆಡುವುದು, ಆಸ್ಪತ್ರೆಯಲ್ಲಿ ರೋಗಿಗಳ ಭೇಟಿ ಹೀಗೆ ಅನೇಕ ಕಾರ್ಯಕ್ರಮಗಳು ಸಂಘಟನೆಯ ವತಿಯಿಂದ ನಡೆಯಲಿದೆ ಎಂದರು.

ಪ್ರವಾದಿ ಮುಹಮ್ಮದ್ ರವರ ಜೀವನ ಆದರ್ಶಗಳು ಮನುಷ್ಯ ಕುಲಕ್ಕೆ ಬದುಕಿನ ಬಹುದೊಡ್ಡ ನೀತಿ ಪಾಠವಾಗಿದೆ. ಪ್ರವಾದಿಯವರು ಬದುಕಿದ ರೀತಿ, ತೋರಿಸಿದ ಸತ್ಪಥ ಯೋಗ್ಯ ರೀತಿಯ ಬದುಕಿಗೆ ದಾರಿದೀಪವಾಗಿದೆ. ‘ಈಗ ಜಗತ್ತಿನಲ್ಲಿ ಇಸ್ಲಾಮಿನ ಚಿಂತನೆಗಳ ಬಗ್ಗೆ ಉಂಟಾಗಿರುವ ಶಂಕೆಯನ್ನು ಪ್ರವಾದಿಯವರ ವಿಧಾನಗಳನ್ನು ನಾವು ಪಾಲಿಸುವ ಮೂಲಕ ಜನರಿಗೆ ತಿಳಿಸಿಕೊಡಬೇಕಿದೆ. ಇಸ್ಲಾಂ ಧರ್ಮವು ಯಾವುದನ್ನು ಪ್ರತಿನಿಧಿಸುತ್ತವೆ ಮತ್ತು ಯಾವುದನ್ನು ವಿರೋಧಿಸುತ್ತದೆ ಎಂಬ ಸರಿಯಾದ ಕಲ್ಪನೆ ಜನರಲ್ಲಿ ಮೂಡಬೇಕು. ಅಂತಹ ಜವಾಬ್ದಾರಿಯು  ಪ್ರತಿಯೊಬ್ಬ ಮುಸಲ್ಮಾನನಿಗೂ ಇರಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!