ಬೆಲೆ ಏರಿಕೆ, ನಿರುದ್ಯೋಗ, ಆದಾಯ ಕುಂಠಿತ ಸಮಸ್ಯೆಗಳಿಗೆ ಐಕ್ಯತೆಯಿಂದ ಹೋರಾಡಲು ಜನ ಮುಂದೆ ಬರಬೇಕು- ಸಿಪಿಐ(ಎಂ)

ಉಡುಪಿ ಅ.20(ಉಡುಪಿ ಟೈಮ್ಸ್ ವರದಿ): ಬಿಜೆಪಿ ಮತ್ತು ಅದರ ಪರಿವಾರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಹಿಂದೂ ಜಾಗರಣ ವೇದಿಕೆ ಮುಂತಾದವುಗಳು ಜಿಲ್ಲೆಯಲ್ಲಿ ಜನತೆಯ ನಡುವೆ ವಿಷದ ಬೀಜ ಬಿತ್ತಿ, ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್ ವಾದಿ) ಆರೋಪಿಸಿದೆ.

ಈ ಬಗ್ಗೆ ಸಿ.ಪಿ.ಐ.(ಎಂ.) ನ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅವರು ಪತ್ರಿಕಾ ಹೇಳಿಕೆ ನೀಡಿ, ಹಿಂದಿನ ಜಿಲ್ಲಾಧಿಕಾರಿಯವರ ಮೇಲೆ ರಾಜಕೀಯ ಪ್ರಭಾವ ಬೀರಿ, ಉಡುಪಿ ಕಲ್ಮತ್ ಮಸೀದಿಯ ಜಾಗವನ್ನು ಸರಕಾರಿ ಜಾಗ ಎಂದು ಘೋಷಿಸಿ, ಅಲ್ಲಿ 35 ವರ್ಷಗಳಿಂದ ನಡೆಯುತ್ತಿದ್ದ ನಮಾಜನ್ನು ನಿಲ್ಲಿಸಲಾಗಿದೆ. ಕಾರ್ಕಳ ತಾಲೂಕಿನ ನಕ್ರೆ ಎಂಬಲ್ಲಿ 12 ವರ್ಷಗಳಿಂದ ನಡೆಯುತ್ತಿದ್ದ ಕ್ರೈಸ್ತ ಪ್ರಾರ್ಥನಾ ಮಂದಿರದ ಮೇಲೆ ಭಜರಂಗದಳದವರು ದಾಳಿ ನಡೆಸಿ, ಬೆದರಿಕೆ ಒಡ್ಡಿದ್ದಾರೆ. ಮತಾಂತರ ಮಾಡುತ್ತಿದ್ದಾರೆ ಎಂದು ಸುಳ್ಳು ಆಪಾದನೆ ಹೂಡಿದ್ದಾರೆ. 

ಸಾಬ್ರಕಟ್ಟೆಯಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ನೆಪವೊಡ್ಡಿ, ಕೋಟ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಗಂಗೊಳ್ಳಿಯಲ್ಲಿ 8 ವರ್ಷದ ಹಿಂದಿನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರ ವಿರುದ್ಧ ಹಾಗೂ ಅವರು ನಂಬಿದ ಪೈಗಂಬರರ ವಿರುದ್ಧ ಅವಹೇಳನಕಾರಿ ಪ್ರಚೋದನೆಯ ಘೋಷಣೆಯನ್ನು ಕೂಗಲಾಗಿದೆ. ಉಡುಪಿಯಲ್ಲಿ ದುರ್ಗಾದೇವಿಗೆ ನಮಿಸುವ ಹೆಸರಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಜಾತ್ಯಾತೀತ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದ ಸಚಿವರು, ಶಾಸಕರ ಸಮ್ಮುಖದಲ್ಲಿ ನಡೆಸಲಾಗಿದೆ. 

ಕುಂದಾಪುರದಲ್ಲಿ ಎರಡು ಕೋಮುಗಳ ಯುವಕ-ಯುವತಿ ನಡುವಿನ ವಿವಾದವನ್ನು ಬಗೆಹರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಪ್ರತಿಭಟನೆ ನಡೆಸಿರುತ್ತಾರೆ. ಕಾಪು ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯವರೇ ಕೇಸರಿ ಸಮವಸ್ತ್ರವನ್ನು ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದರ ಮೂಲಕ ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಿದ್ದೇವೆ ಎಂಬ ಸಂದೇಶ ನೀಡಿದ್ದಾರೆ. ಆದರೆ ಠಾಣಾಧಿಕಾರಿಗಳು ಅದು ಕೇಸರಿ ಸಮವಸ್ತ್ರ ಅಲ್ಲ ಎಂದು ಸ್ಪಷ್ಠೀಕರಣ ನೀಡಿದ್ದಾರೆ. ಹೀಗೆ ಒಂದಲ್ಲ-ಎರಡಲ್ಲ, ಹತ್ತು ಹಲವು ಘಟನೆಗಳು ದಿನಬೆಳಗಾದರೆ ನಡೆಯುತ್ತಿರುತ್ತದೆ. 

2021ರ ಮೇ ತಿಂಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ಅಧಿಕಾರಾವಧಿ ಮುಗಿದಿದೆ. ಕರೋನ ಮತ್ತಿತರ ಕಾರಣಗಳನ್ನು ನೀಡಿ, ಅವನ್ನು ಮುಂದೂಡಲಾಗಿದೆ. ಕರೋನಾ ಸಂದರ್ಭವನ್ನು ನಿರ್ವಹಿಸಿದ ರೀತಿ, ಅಪಾರ ಸಾವು ನೋವು, ಆಕ್ಸಿಜನ್ ಕೊರತೆ, ಖಾಸಗಿ ಆಸ್ಪತ್ರೆಗಳ ಸುಲಿಗೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಎಲ್ಲಾ ಅವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ವಿಪರೀತ ಹೆಚ್ಚಳ, ಕಾರ್ಖಾನೆಗಳ ಮತ್ತು ಖಾಸಗೀ ಸಂಸ್ಥೆಗಳ ಮುಚ್ಚುವಿಕೆಯಿಂದ ಉಂಟಾದ ನಿರುದ್ಯೋಗ, ಜನರಿಗೆ ಪರಿಹಾರ ನೀಡುವಲ್ಲಿ ಕೊರತೆ ಮತ್ತು ವಿಫಲತೆ. ಈ ಎಲ್ಲಾ ಕಾರಣಗಳಿಂದ ಜನತೆ ಬೇಸತ್ತಿದ್ದಾರೆ. ರೈತರಿಗೆ ಮಾತ್ರ ಸೀಮಿತವಾಗಿದ್ದ ಆತ್ಮಹತ್ಯಾ ಪ್ರಕರಣಗಳು ಎಲ್ಲಾ ವಿಭಾಗಗಳನ್ನು ತಟ್ಟಿದೆ. ತಾಲೂಕು/ಜಿಲ್ಲಾ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಆಳುವ ಪ್ರತಿನಿಧಿಗಳ ವಿರುದ್ಧ ಜನ ರೋಷಗೊಂಡಿದ್ದಾರೆ. ಇಂತಹ ಕಷ್ಟಕಾಲದಲ್ಲಿ ಖಾಸಗಿ ಸಂಸ್ಥೆಗಳು ಜನರ ಸುಲಿಗೆಗೆ ಮುಂದಾಗಿವೆ ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಕುಯಿಲಾಡಿ ಸುರೇಶ್ ನಾಯಕ್‌ರ ಅಧ್ಯಕ್ಷತೆಯಲ್ಲಿರುವ ಖಾಸಗಿ ಬಸ್ ಮಾಲಕರ  ಸಂಘವು ಶೇ. 25 ರಷ್ಟು ಬಸ್ ಪ್ರಯಾಣದರ ಏರಿಕೆ ಮಾಡುತ್ತೇವೆ ಎಂದು ಹೇಳಿ ಶೇ. 50 ರ ವರೆಗೂ ಪ್ರಯಾಣದರ ಹೆಚ್ಚಳ ಮಾಡಿದೆ. ಇಂತಹ ಹಗಲು ದರೋಡೆಗಳ ವಿರುದ್ಧ ಜನರು ಐಕ್ಯತೆಯಿಂದ ಪ್ರತಿಭಟನೆ, ಚಳುವಳಿ ನಡೆಸಬಾರದೆಂಬ ಉದ್ದೇಶದಿಂದ ಒಡೆದು ಆಳುವ ವಿಷದ ಬೀಜ ಬಿತ್ತುವುದಕ್ಕಾಗಿ ಕೋಮು ಭಾವನೆ ಕೆರಳಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಸಮುದಾಯದ ನಡುವೆ ಇರುವ ಬೆರಳೆಣಿಕೆಯ ಸಂಘಟನೆಗಳು ಮಾಡುತ್ತಿರುವ ಕೃತ್ಯಗಳು ಬೆಂಕಿಗೆ ತುಪ್ಪ ಎರಚಿದಂತಾಗಿದೆ. 

ಎರಡೂ ಕಡೆಗಳಿಂದ ನಡೆಯುತ್ತಿರುವ ಘಟನೆಗಳು ಈ ಸಂಘಟನೆಗಳ ಬಲ ಹೆಚ್ಚಿ, ಪ್ರಜಾಪ್ರಭುತ್ವ ಶಕ್ತಿಗಳ ಧ್ವನಿ ಕುಂಠಿತಗೊಳ್ಳುವ ಅಪಾಯ ಎದುರಾಗುತ್ತಿದೆ. ಜನರ ಐಕ್ಯತೆಗೆ ಕುಂದು ಉಂಟಾಗುತ್ತಿದೆ. ಜಿಲ್ಲೆಯ ಜನತೆ ಇದನ್ನು ಮನಗಂಡು, ಜನರನ್ನು ಒಡೆಯುವ ಘೋಷಣೆಗಳಿಗೆ ಮಾರು ಹೋಗದೆ, ಬೆಲೆ ಏರಿಕೆ, ನಿರುದ್ಯೋಗ, ಆದಾಯ ಕುಂಠಿತ ಮೊದಲಾದ ದಿನನಿತ್ಯದ ಸಮಸ್ಯೆಗಳಿಗೆ ಐಕ್ಯತೆ ಯಿಂದ ಹೋರಾಡಲು ಮುಂದೆ ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!