ಉದ್ಯಾವರ: ದಲಿತ ಸರಕಾರಿ ನೌಕರನಿಗೆ ಬೆದರಿಕೆ- ಆರೋಪಿಗಳನ್ನು ತಕ್ಷಣ ಬಂಧಿಸಿ: ದಸಂಸ ಆಗ್ರಹ

ಉದ್ಯಾವರ ಅ.20(ಉಡುಪಿ ಟೈಮ್ಸ್ ವರದಿ): ಉದ್ಯಾವರ ಗ್ರಾಮ ಪಂಚಾಯತ್ ನ ದಲಿತ ಸರಕಾರಿ ನೌಕರ–ಲೆಕ್ಕ ಸಹಾಯಕ ಶಿವರಾಜು.ಎಂ ಅವರಿಗೆ ಗ್ರಾಮ ಸಭೆಯಲ್ಲಿ ಬಹಿರಂಗವಾಗಿ ಅವಮಾನಗೊಳಿಸಿ, ದೌರ್ಜನ್ಯ ಎಸಗಿ, ಸಾಮಾಜಿಕ ಬಹಿಷ್ಕಾರ ಹಾಕಿರುವ ವಿಚಾರಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ದಸಂಸ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಮಾತನಾಡಿ, ಸೆ.23 ರಂದು ಉದ್ಯಾವರ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯಲ್ಲಿ ಪಂಚಾಯತ್ ನ ದಲಿತ ಸರಕಾರಿ ನೌಕರ–ಲೆಕ್ಕ ಸಹಾಯಕ ಶಿವರಾಜು.ಎಂ ಗೆ ಗ್ರಾಮ ಸಭೆಯಲ್ಲಿ ಬಹಿರಂಗವಾಗಿ ಅವಮಾನಗೊಳಿಸಿ, ದೌರ್ಜನ್ಯ ಎಸಗಿ, ಸಾಮಾಜಿಕ ಬಹಿಷ್ಕಾರ ಹಾಕಿರುವವರ ವಿರುದ್ದ ಸೆ.25 ರಂದು ಪ.ಜಾ/ಪ.ಪಂಗಳ (ದೌರ್ಜನ್ಯ ತಡೆ) ಅಧಿನಿಯಮ, 1989 ತಿದ್ದುಪಡಿ ಅಧಿನಿಯಮದಡಿ ಕಾಪು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿಗಳಾದ ಶೇಖರ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್ ಉಡುಪಿಯ ವಿಶೇಷ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನ ಅರ್ಜಿಯನ್ನು ಅ.16 ರಂದು ನ್ಯಾಯಾಲಯ ವಜಾಗೊಳಿಸಿ ಆದೇಶಿಸಿತ್ತು. ಈ ಬಗ್ಗೆ ಕಾಪು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 25 ದಿವಸ ಕಳೆದರೂ ಪೋಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸದೇ ಮೀನಮೇಷ ಎಣಿಸುತ್ತಿದೆ. 

ದಲಿತರಿಗೆ ರಕ್ಷಣೆ ನೀಡಬೇಕಾದ ಪೋಲೀಸರು ಆರೋಪಿಗಳನ್ನು ಬಂಧಿಸದೆ ರಕ್ಷಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸದೇ ಇರುವುದರಿಂದ ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಆರೋಪಿಗಳು ಯಾವುದೇ ಭಯವಿಲ್ಲದೇ ವ್ಯಾಪಾರ, ವಹಿವಾಟು ಮಾಡಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಆರೋಪಿಗಳು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲರಾಗಿದ್ದು, ಸೆ.27 ರಂದು ಪಂಚಾಯತ್ ಕಛೇರಿ ಎದುರು ಗ್ರಾಮದ ಅಮಾಯಕ ಜನರನ್ನು ಎತ್ತಿಕಟ್ಟಿ, ಪ್ರಚೋದಿಸಿ ಗಲಾಟೆ ಮಾಡಿಸಿ, ದಲಿತ ಸರಕಾರಿ ನೌಕರ ಸುಳ್ಳು ಪ್ರಕರಣ ದಾಖಲಿಸಿ ರುವುದಾಗಿ ಗ್ರಾಮಸ್ಥರಿಗೆ ತಪ್ಪು ಸಂದೇಶ ರವಾನಿಸಿ, ಪ್ರತಿಭಟನೆ ಮಾಡಿಸಿರುತ್ತಾರೆ. ಪ್ರಕರಣದ ಸಂತ್ರಸ್ಥರಾದ ದಲಿತ ಸರಕಾರಿ ನೌಕರರನ್ನು ಉದ್ಯಾವರ ಗ್ರಾಮ ಪಂಚಾಯತ್ ನಿಂದ ಓಡಿಸುವುದಾಗಿ ಹೇಳುತ್ತಾ ತಿರುಗಾಡುತ್ತಿದ್ದಾರೆ.  ಪ್ರಕರಣದ ಸಂತ್ರಸ್ಥರಾದ ದಲಿತ ಸರಕಾರಿ ನೌಕರರಿಗೆ ಈ ಆರೊಪಿಗಳಿಂದ ಬೆದರಿಕೆ ಇರುವ ಕಾರಣ ಹಾಗೂ ಆರೊಪಿಗಳಿಗೆ ಕಾನೂನಿನ ಮೇಲೆ ಗೌರವ ಇಲ್ಲದಿರುವುದರಿಂದ ಆರೋಪಿಗಳಾದ ಶೇಖರ್ ಕೋಟ್ಯಾನ್ ಮತ್ತು ಭಾಸ್ಕರ್ ಕೋಟ್ಯಾನ್ ನನ್ನು ಕೂಡಲೇ ಬಂಧಿಸಿ ನ್ಯಾಯ ದೊರಕಿಸಬೇಕೆಂದು ಮನವಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!