ಖಾಸಗಿ ದೂರುಗಳ ವಿಚಾರಣೆಗೆ ಹೈಕೋರ್ಟ್ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಅ.19: ಖಾಸಗಿ ದೂರುಗಳನ್ನು ವಿಚಾರಣೆಗೆ ಅಂಗೀಕರಿಸಲು ಹೈಕೋರ್ಟ್ ಮಾರ್ಗಸೂಚಿಗಳನ್ನು ರೂಪಿಸಿದೆ.
ಈ ಮಾರ್ಗಸೂಚಿಗಳಲ್ಲಿ ಖಾಸಗಿ ದೂರುಗಳನ್ನು ವಿಚಾರಣೆಗೆ ಅಂಗೀಕರಿಸುವಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಸರಿಸ ಬೇಕಾದ ಕ್ರಮಗಳ ಕುರಿತು ವಿವರಿಸಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದಾಖಲಿಸಿರುವ ಎಫ್.ಐ.ಆರ್ ರದ್ದು ಕೋರಿ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು 7 ಮಾರ್ಗ ಸೂಚಿಗಳನ್ನು ರೂಪಿಸಿದ್ದಾರೆ. ಅದರಂತೆ ಖಾಸಗಿ ದೂರು ಸಲ್ಲಿಕೆಯಾದಾಗ ಅದನ್ನು ಓದಿ, ಕೃತ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೆ ದೂರನ್ನು ವಜಾಗೊಳಿಸಬಹುದು. ಆದರೆ, ದೂರುದಾರ ಸೂಕ್ತ ರೀತಿಯಲ್ಲಿ ದೂರು ಸಿದ್ಧಪಡಿಸಿಲ್ಲ ಎಂಬ ಮಾತ್ರಕ್ಕೆ ವಜಾಗೊಳಿಸಬಾರದು. ಅಗತ್ಯ ಸಂದರ್ಭದಲ್ಲಿ ದೂರುದಾರ ಮತ್ತು ಸಾಕ್ಷಿಗಳನ್ನು ಪರಿಶೀಲಿಸಬಹುದು.

ಸಿಆರ್‍ಪಿಸಿ ಸೆಕ್ಷನ್ 200ರ ಅನುಸಾರ ದೂರನ್ನು ಓದಿದ ನಂತರ ಸೂಕ್ತ ಅಂಶಗಳಿವೆ ಎಂಬ ತೀರ್ಮಾನಕ್ಕೆ ಬಂದರೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಂಡು ಆರೋಪಿಗೆ ನೋಟಿಸ್ ಜಾರಿಗೊಳಿಸಬಹುದು. ಎಲ್ಲ ಪ್ರಕ್ರಿಯೆ ಅನುಸರಿಸಿದ ಬಳಿಕವೂ ಪ್ರಕರಣದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಸಮರ್ಪಕ ಅಂಶಗಳು ಇಲ್ಲ ಎಂದು ಕಂಡು ಬಂದರೆ ಆ ಬಗ್ಗೆ ಮ್ಯಾಜಿಸ್ಟ್ರೇಟ್ ಖುದ್ದು ವಿಚಾರಣೆ ನಡೆಸಬಹುದು ಅಥವಾ ನೇರ ತನಿಖೆಗೆ ನಿರ್ದೇಶಿಸಬಹುದು.

ಒಂದು ವೇಳೆ ಅಪರಾಧ ಕೃತ್ಯವನ್ನು ಸಾಬೀತು ಪಡಿಸುವಂತಹ ಅಂಶಗಳು ಲಭ್ಯವಾಗದಿದ್ದರೆ ದೂರನ್ನು ರದ್ದುಪಡಿಸ ಬಹುದು. ಸೆಕ್ಷನ್ 202ರ ಅನುಸಾರ ಕ್ರಮ ಕೈಗೊಳ್ಳುವುದು ಎಲ್ಲ ಸಂದರ್ಭಗಳಲ್ಲೂ ಕಡ್ಡಾಯವಲ್ಲ. ಸೂಕ್ತವಿದ್ದರೆ ಮಾತ್ರ ದೂರನ್ನು ವಿಚಾರಣೆಗೆ ಆದೇಶಿಸಬಹುದು. ಕಾಗ್ನಿಜೆನ್ಸ್ ತೆಗೆದುಕೊಳ್ಳುವುದಕ್ಕೆ ವಿವೇಚನೆ ಬಳಸಬೇಕು. ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಬಗ್ಗೆ ಆದೇಶದಲ್ಲಿ ಸಂಕ್ಷಿಪ್ತವಾಗಿ ವಿವರಿಸಬೇಕು. ಪೊಲೀಸ್ ಅಧಿಕಾರಿ ಬಿ ರಿಪೋರ್ಟ್ ಸಲ್ಲಿಸಿದ ಸಂದರ್ಭದಲ್ಲಿ ಅದನ್ನು ದೂರುದಾರ ಪ್ರಶ್ನಿಸಿದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಮೇಲೆ ಹೇಳಿದ ಕ್ರಮಗಳನ್ನು ಅನುಸರಿಸಬೇಕು.

ಜಮೀನು ವ್ಯಾಜ್ಯವೊಂದರ ಸಂಬಂಧ ಭೂ ಮಾಲಕರು ಎನ್ನಲಾದ ಚಿಕ್ಕಬಳ್ಳಾಪುರದ ಬಿ.ಎನ್.ನರಸಿಂಹ ಮೂರ್ತಿ, ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ವಿರುದ್ಧ ದಾಖಲಿಸಿದ್ದ ಖಾಸಗಿ ದೂರನ್ನು ತನಿಖೆ ನಡೆಸುವಂತೆ ನಂದಿಗಿರಿ ಗ್ರಾಮದ ಠಾಣೆ ಪೊಲೀಸರಿಗೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿತ್ತು. ಈ ಪ್ರಕರಣದಲ್ಲಿ ಅಪರಾಧ ಕೃತ್ಯ ನಡೆದಿರುವುದನ್ನು ಸಾಬೀತುಪಡಿಸಲು ಯಾವುದೇ ದಾಖಲೆ ಮತ್ತು ಸಾಕ್ಷ್ಯ ಲಭ್ಯವಿಲ್ಲದಿದ್ದರೂ ತನಿಖೆಗೆ ಆದೇಶಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿ ತನಿಖೆಗೆ ಆದೇಶಿಸುವ ಮುನ್ನ ಮ್ಯಾಜಿಸ್ಟ್ರೇಟ್ ಕೊರ್ಟ್ ಕಡ್ಡಾಯವಾಗಿ ಅನುಸರಿಸಬೇಕಾದ 7 ಮಾರ್ಗಸೂಚಿಗಳನ್ನು ರಚಿಸಿದೆ. ಇದೇ ವೇಳೆ ಟ್ರಸ್ಟ್ ವಿರುದ್ಧ ದಾಖಲಿಸಿದ್ದ ಎಫ್.ಐ.ಆರ್ ಮತ್ತು ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!