ಮಂಗಳೂರು ಮಗು ಅದಲು-ಬದಲು ಪ್ರಕರಣ: ಡಿಎನ್’ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ

ಮಂಗಳೂರು, ಅ 19: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಮಗು ಅದಲು-ಬದಲು ಪ್ರಕರಣಕ್ಕೆ ಸಂಬಂಧಿಸಿ ಮಗು, ತಂದೆ ಹಾಗೂ ತಾಯಿಯ ಡಿಎನ್‍ಎ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಹೆಣ್ಣು ಮಗು ಎಂದು ಆಸ್ಪತ್ರೆಯ ಸಿಬ್ಬಂದಿಗಳು ದಾಖಲೆ ನೀಡಿದ್ದರು. ಆದರೆ ಪೋಷಕರಿಗೆ ಗಂಡು ಮಗು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಈ ಬಗ್ಗೆ ಕೇಳಿದಾಗ ಮಗು ನಿಮ್ಮದೇ ದಾಖಲೆ ನೀಡಿದ್ದು ತಪ್ಪಾಗಿದೆ  ಎಂದು ಮಗುವಿನ ತಂದೆ ಕುಂದಾಪುರ ನಿವಾಸಿ ಮುಸ್ತಫಾ ನಗರದ ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೀಗ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನ್ಯಾಯಾಲಯ ಮಗು, ತಂದೆ ಹಾಗೂ ತಾಯಿಯ ಡಿಎನ್‍ಎ ಪರೀಕ್ಷೆಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಡಿಎನ್‍ಎ ಸ್ಯಾಂಪಲ್ ನ್ನು ಹೈದ್ರಾಬಾದ್ ಅಥವಾ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸುವ ಸಾಧ್ಯತೆ ಇದೆ. ವರದಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ನಡುವೆ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಮುಸ್ತಫಾ ಅವರ ಪತ್ನಿ ಅಮ್ರೀನ್ ಸೆ. 28 ರಂದು ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಗಂಡು ಮಗುವಿಗೆ ಜನ್ಮ ನೀಡಿದ್ದು ಆದರೆ ಆಸ್ಪತ್ರೆಯ ದಾಖಲೆಗಳಲ್ಲಿ ಸಿಬ್ಬಂದಿಗಳು ಹೆಣ್ಣು ಮಗು ಎಂದು ತಪ್ಪಾಗಿ ನಮೂದಿಸಿದ್ದರು. ಮಗು ಅದಲು ಬದಲು ಆಗಿಲ್ಲ ಇದಕ್ಕಾಗಿ ಕ್ಷಮೆ ಯಾಚಿಸುತ್ತೇವೆ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!