ಬಲವಂತ ಮತಾಂತರ ಆರೋಪ- ಚರ್ಚ್ ಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರ ಭಜನೆ

ಹುಬ್ಬಳ್ಳಿ, ಅ.19: ನಗರದ ಭೈರಿದೇವರ ಕೊಪ್ಪದಲ್ಲಿರುವ ಚರ್ಚ್ ವೊಂದರಲ್ಲಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಅ.17 ರಂದು ಬೆಳಿಗ್ಗೆ ಚರ್ಚ್‍ಗೆ ನುಗ್ಗಿದ ಸಂಘ ಪರಿವಾರದ ಕಾರ್ಯಕರ್ತರು ಭಜನೆಗಳನ್ನು ಹಾಡುವ ಮೂಲಕ ಪ್ರತಿಭಟಿಸಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿ ಮತಾಂತರದ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ”ಬಲವಂತದ ಮತಾಂತರದ ಆರೋಪವನ್ನು ಮಾಡಿರುವ ವಿಶ್ವನಾಥ್, ಚರ್ಚ್ ನ ಪ್ರಾರ್ಥನೆಯ ಬದಲು ತಾನು ಹಿಂದು ಪ್ರಾರ್ಥನೆಯನ್ನು ಹಾಡಿದಾಗ ಪ್ಯಾಸ್ಟರ್ ಅವರಾಧಿ ತನ್ನನ್ನು ನಿಂದಿಸಿದ್ದರು” ಎಂದೂ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಚರ್ಚ್ ನ ಸದಸ್ಯರು ಮತ್ತು ಸಂಘಪರಿವಾರದ ಕಾರ್ಯಕರ್ತರು ಪರಸ್ಪರ ಆರೋಪಿಸಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಕ್ಷಣೆ ಕಾಯ್ದೆ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳ ವಿರುದ್ಧ ಕಾಯ್ದೆಯಡಿ ಆರೋಪಿ ಮತ್ತು ಇತರರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಇತರ ಮೂವರನ್ನು ವಿಚಾರಣೆಯ ಬಳಿಕ ಬಿಡುಗಡೆಗೊಳಿಸಿದ್ದಾರೆ.

ಈ ನಡುವೆ ಘಟನೆಯನ್ನು ಖಂಡಿಸಿ ಚರ್ಚ್ ನ ಪ್ಯಾಸ್ಟರ್ ಸೋಮು ಅವರಾಧಿ ಎಂಬವರ ಬಂಧನಕ್ಕೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಕಾರ್ಯಕರ್ತರು ಹೆದ್ದಾರಿ ತಡೆಯನ್ನೂ ನಡೆಸಿದ್ದರು.

ಇನ್ನು ಘಟನೆಯನ್ನು ದೃಢಪಡಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ ಅವರು, ಘಟನೆಗೆ ಸಂಬಂಧಿಸಿ ತನಿಖೆಯು ಪ್ರಗತಿಯಲ್ಲಿದೆ. ಈ ವರೆಗೆ ಅವರಾಧಿಯವರನ್ನು ಮಾತ್ರ ಬಂಧಿಸಲಾಗಿದೆ. ಚರ್ಚ್ ನಿಂದ ಯಾವುದೇ ದೂರನ್ನು ನಾವು ಸ್ವೀಕರಿಸಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಬಜರಂಗದಳದ ರಾಜ್ಯ ಸಂಚಾಲಕ ರಾಘು ಸಕಲೇಶಪುರ ಅವರು ಮಾಹಿತಿ ನೀಡಿ, ವಿಶ್ವನಾಥ ಎಂಬ ವ್ಯಕ್ತಿಯನ್ನು ಮತಾಂತರಕ್ಕಾಗಿ ಚರ್ಚ್ ಗೆ ಕರೆತರಲಾಗಿತ್ತು. ಅವರು ಚರ್ಚ್ ನಿಂದ ಪೊಲೀಸ್ ಠಾಣೆಗೆ ತೆರಳಿ ಅವರಾಧಿ ಮತ್ತು ಇತರರ ವಿರುದ್ದ ದೂರು ದಾಖಲಿಸಿದ್ದರು. ಬಳಿಕ ನಮ್ಮ ಕಾರ್ಯಕರ್ತರು ಚರ್ಚ್ ನೊಳಗೆ ಸಮಾವೇಶಗೊಂಡು ಹಿಂದೂ ಭಜನೆಗಳನ್ನು ಹಾಡುವ ಮೂಲಕ ಪ್ರತಿಭಟಿಸಿದ್ದರು” ಎಂದು ಹೇಳಿದ್ದಾರೆ.

1 thought on “ಬಲವಂತ ಮತಾಂತರ ಆರೋಪ- ಚರ್ಚ್ ಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರ ಭಜನೆ

Leave a Reply

Your email address will not be published. Required fields are marked *

error: Content is protected !!