ಮಂಗಳೂರು: ಹೆರಿಗೆಯಾದಾಗ ಹೆಣ್ಣು ಮಗು- ಬಳಿಕ ನೀಡಿದ್ದು ಗಂಡು ಮಗು!

ಮಂಗಳೂರು ಅ.15: ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಹೆಣ್ಣು ಮಗು ಎಂದು ಆಸ್ಪತ್ರೆಯ ಸಿಬ್ಬಂದಿಗಳು ಮನೆಯವರಿಗೆ ದಾಖಲೆ ನೀಡಿದ್ದರು. ಆದರೆ ಪೋಷಕರಿಗೆ ಗಂಡು ಮಗುವೊಂದನ್ನು ನೀಡಲಾಗಿದೆ. ಈ ಘಟನೆ ನಡೆದಿರುವುದು ದ.ಕ ಜಿಲ್ಲೆಯ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ.

ಇದೀಗ ಘಟನೆ ಮಗುವಿನ ಪೋಷಕರಲ್ಲಿ ಗೊಂದಲ ಉಂಟುಮಾಡಿದ್ದು, ನಗರದ ಆಸ್ಪತ್ರೆಯ ವಿರುದ್ಧ ಪೋಷಕರು ಮಗು ಬದಲಾಯಿಸಿ ನೀಡಿರುವ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ಆಸ್ಪತ್ರೆ ಮೂಲಗಳಿಂದ ಇನ್ನಷ್ಟೇ ಪ್ರತಿಕ್ರಿಯೆ ಸಿಗಬೇಕಾಗಿದೆ.

ಈ ಬಗ್ಗೆ ಮಗುವಿನ ತಂದೆ ಕುಂದಾಪುರದ ಮುಸ್ತಫಾ ಮಾಹಿತಿ ನೀಡಿದ್ದು, ಮುಸ್ತಫಾ ಅವರ ಪತ್ನಿಯನ್ನು ಸೆ. 27ರಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಿಸಲಾಗಿತ್ತು. ಅವರಿಗೆ ಬಿಪಿ ಇದ್ದ ಕಾರಣ ಆಪರೇಷನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಈ ಸಂದರ್ಭ ಹೆಣ್ಣು ಮಗು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ 18 ದಿನಗಳ ಕಾಲ ಐಸಿಯು ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟ ಮಾಹಿತಿ ನೀಡದ ಕಾರಣ ಮಗುವನ್ನು ಬೃಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗು ಗಂಡು ಎಂದು ತಿಳಿದು ಬಂದಿದೆ. ನಂತರ ಮಗುವನ್ನು ಮತ್ತೆ ಲೇಡಿಗೋಶನ್ ಆಸ್ಪತ್ರೆಗೆ ಕರೆತಂದು ವೈದ್ಯಾಧಿಕಾರಿ ಬಳಿ ಈ ಕುರಿತು ಪ್ರಶ್ನಿಸಿದಾಗ ಈ ಮಗು ನಿಮ್ಮದೇ ಆಗಿದ್ದು, ಆಸ್ಪತ್ರೆಯ ದಾಖಲೆಯಲ್ಲಿ ತಪ್ಪಾಗಿ ನಮೂದಿಸಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿರುವುದಾಗಿ ಮುಸ್ತಫಾ ಅವರು ಮಾಹಿತಿ ನೀಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!