ಕರ್ನಾಟಕ: ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರಲು ಗಂಭೀರ ಚಿಂತನೆ
ಬೆಂಗಳೂರು: ರಾಜ್ಯ ಸರ್ಕಾರ ಗೋ ಹತ್ಯೆ ಮತ್ತು ರಕ್ಷಣೆ ಮಸೂದೆ 2012ರನ್ನು ಮತ್ತೆ ಜಾರಿಗೆ ತರಲು ಮುಂದಾಗಿದೆ. ಈ ಮಸೂದೆ ಈಗಾಗಲೇ ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಜಾರಿಯಲ್ಲಿದ್ದು ಅಲ್ಲಿ ಯಾವ ರೀತಿ ಜಾರಿಗೆ ಬರುತ್ತಿದೆ ಎಂದು ನೋಡಿ ಅಧ್ಯಯನ ಮಾಡಿಕೊಂಡು ಬರಲು ರಾಜ್ಯದಿಂದ ಅಧಿಕಾರಿಗಳ ತಂಡವೊಂದನ್ನು ಕಳುಹಿಸಿಕೊಡಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾನ್ ತಿಳಿಸಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಅವರು, ಈ ಮಸೂದೆ ಒಂದು ಬಾರಿ ಕಾನೂನಾಗಿ ಜಾರಿಗೆ ಬಂದ ನಂತರ ಗೋವುಗಳನ್ನು ಕೊಲ್ಲಲು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಬೇರೆ ರಾಜ್ಯಗಳಿಗೆ ಹಸುಗಳನ್ನು ಸಾಗಾಟ ಮಾಡುವುದನ್ನು ಕೂಡ ತಡೆಯಲಾಗುತ್ತದೆ. ಕಾಮಧೇನುವಾದ ಗೋವುಗಳನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯದ ಅಲ್ಲಲ್ಲಿ ಗೋಶಾಲೆಗಳನ್ನು ಬಲವರ್ಧಿಸಲು ನಾವು ಆರಂಭಿಸಿದ್ದೇವೆ. ಸ್ಥಳೀಯ ತಳಿಗಳ ಹಸುಗಳನ್ನು ರಕ್ಷಿಸಲು ಗೋ ಸೇವಾ ಆಯೋಗವನ್ನು ಸ್ಥಾಪಿಸುವುದಾಗಿ ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಘೋಷಿಸಿತ್ತು ಎಂದು ಹೇಳಿದರು.
ತೆಲಂಗಾಣ, ಅಸ್ಸಾಂ, ಬಿಹಾರ, ದೆಹಲಿ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳು ನಾಡು, ಉತ್ತರ ಪ್ರದೇಶ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಲ್ಲಿ ಗೋ ಹತ್ಯೆ ಮಸೂದೆಯನ್ನು ಜಾರಿಗೆ ತರಲಾಗಿದ್ದು ಕರ್ನಾಟಕ ಸಹ ಕಟ್ಟುನಿಟ್ಟಾಗಿ ಸದ್ಯದಲ್ಲಿಯೇ ಜಾರಿಗೆ ತರಲಿದೆ ಎಂದು ಹೇಳಿದರು.
ಕೋವಿಡ್-19 ಸಮಸ್ಯೆ ಬಗೆಹರಿದ ನಂತರ ಅಧಿಕಾರಿಗಳನ್ನು ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸಿ ಅಲ್ಲಿನ ಗೋಹತ್ಯೆ ನಿಷೇಧ ಕಾನೂನನ್ನು ಅಧ್ಯಯನ ಮಾಡಿ ಬರುವಂತೆ ಸೂಚಿಸುತ್ತೇವೆ. 2010ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಕಾನೂನನ್ನು ಮಂಡಿಸಿದ್ದೆವು. ಆಗ ಗೃಹ ವ್ಯವಹಾರಗಳ ಸಚಿವಾಲಯ ಕೆಲವು ತಿದ್ದುಪಡಿಗಳನ್ನು ಮಾಡಿ ಎಂದು ಸೂಚಿಸಿದರು. ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಅದು ಜಾರಿಗೆ ಬರಲಿಲ್ಲ ಎಂದು ಸಚಿವ ಚೌಹಾನ್ ಹೇಳಿದರು.