ಜಾಮೀನು ಅರ್ಜಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಿ- ಸುಪ್ರೀಂ ಕೋರ್ಟ್
ನವದೆಹಲಿ: ವ್ಯಕ್ತಿಯ ಸ್ವಾತಂತ್ರ್ಯವು ‘ಪವಿತ್ರ’ವಾದದ್ದು ಮತ್ತು ಜಾಮೀನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಆದಷ್ಟು ಬೇಗನೆ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಬಂಧನ ಪೂರ್ವ ಅಥವಾ ಬಂಧನದ ನಂತರ ಜಾಮೀನು ಕೋರಿ ಸಲ್ಲಿಸುವ ಅರ್ಜಿಗಳಿಗೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸುವಂತಿಲ್ಲ. ಆದರೆ ಇಂತಹ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎನ್ನುವುದು ಕನಿಷ್ಠ ನಿರೀಕ್ಷೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇರುವ ತನ್ನ ಜಾಮೀನು ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿ ಆರೋಪಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಮತ್ತು ಎಎಸ್ ಓಕಾ ಅವರ ನ್ಯಾಯಪೀಠ, ಈ ಬಗ್ಗೆ ನಾವು ಸದ್ಯಕ್ಕೆ ಪರಿಶೀಲಿಸುವುದಿಲ್ಲ, ಆದರೆ ವ್ಯಕ್ತಿಯ ಸ್ವಾತಂತ್ರ್ಯವು ಪವಿತ್ರವಾಗಿದೆ ಮತ್ತು ಬಂಧನದ ಮುನ್ನ ಅಥವಾ ಬಂಧನದ ನಂತರವಾಗಿರಲಿ, ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರೆ ಸಾಧ್ಯವಾದಷ್ಟು ಬೇಗ ಅದರ ವಿಚಾರಣೆ ನಡೆಯಬೇಕು ಎಂದು ನಾವು ನಿರೀಕ್ಷಿಸುತ್ತೇವೆ’ಎಂದು ಹೇಳಿದೆ.
ಸೆಷನ್ಸ್ ನ್ಯಾಯಾಲಯವು ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದನ್ನು ಸುಪ್ರೀಂ ಪೀಠ ಗಮನಿಸಿತು, ನಂತರ ಅವರು ಜುಲೈ 7 ರಂದು ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರ ಪರ ವಕೀಲರು, ಈ ವಿಷಯವನ್ನು ನ್ಯಾಯಾಲಯದ ಮುಂದೆ ಹಲವು ಬಾರಿ ಪಟ್ಟಿ ಮಾಡಲಾಗಿತ್ತಾದರೂ ವಿಚಾರಣೆಯನ್ನು ನಡೆಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.