ಉಡುಪಿ ಕೋವಿಡ್ ಮುನ್ನೆಚ್ಚರಿಕೆ: ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಉಡುಪಿ ಅ.9(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ವಾಣಿಜ್ಯ ಹಾಗೂ ಇತರೆ ಚಟುವಟಿಕೆಗಳು ಮತ್ತೆ ನಿಧಾನವಾಗಿ ಆರಂಭಗೊಂಡಿದೆ. ಈ ನಡುವೆ ದಸರಾ, ದೀಪಾವಳಿ ಹಬ್ಬಗಳು ಬರುತ್ತಿದ್ದು ಕೋವಿಡ್ ಕುರಿತ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.

ಹಬ್ಬದ ಸಂದರ್ಭಗಳಲ್ಲಿ ಮೆರವಣಿಗೆ  ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆಗಳು ನಡೆಯುವುದರಿಂದ ಹೆಚ್ಚು ಭಕ್ತರು ಸೇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಪರಿಷ್ಕೃತ ಮಾರ್ಗಸೂಚಿಯನ್ನು  ಪ್ರಕಟಿಸಿ ಸರಕಾರ ಆದೇಶ ನೀಡಿದೆ.

ಜಿಲ್ಲೆಯಲ್ಲಿ ದಸರಾ ಹಾಗೂ ದೀಪಾವಳಿಯ ಸಂದರ್ಭದಲ್ಲಿ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವ ಸಲುವಾಗಿ ಅ. 25 ರವರೆಗೆ ಅನ್ವಯವಾಗುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಆದೇಶ ಹೊರಡಿಸಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ದಸರಾ ಅವಧಿಯಲ್ಲಿ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು, ಮಸೀದಿಗಳು, ಚರ್ಚುಗಳು ಹಾಗೂ ಇತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಹಾಗೂ ಸರಕಾರ ಹೊರಡಿಸಿರುವ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಧಾರ್ಮಿಕ ಸ್ಥಳಗಳ ಪೂಜಾ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ ಆದರೆ ಧಾರ್ಮಿಕ ಕೇಂದ್ರಗಳಲ್ಲಿ ಜಾತ್ರೆಗಳು ಉತ್ಸವಗಳು ಮೆರವಣಿಗೆಗಳು ಹಾಗೂ ಜನರ ಒಟ್ಟು ಗೂಡುವಿಕೆಯನ್ನು ನಿರ್ಬಂಧಿಸಲಾಗಿದೆ.

ಇದರೊಂದಿಗೆ ವಿದ್ಯಾಭ್ಯಾಸದ ಸಲುವಾಗಿ ಕೇರಳದಿಂದ ಉಡುಪಿ ಜಿಲ್ಲೆಗೆ ಆಗಮಿಸುವ ನರ್ಸಿಂಗ್ ಇಂಜಿನಿಯರಿಂಗ್ ಪ್ಯಾರಮೆಡಿಕಲ್ ಒಳಗೊಂಡಂತೆ ಎಲ್ಲಾ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರವೇಶಿಸುವ ಮೊದಲು 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು ಮತ್ತು ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ಒಳಪಡಬೇಕು ಹಾಗೂ ಕೊನೇಯ ದಿನ ಆರ್ ಟಿಪಿಸಿಆರ್  ವರದಿಯನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ. ಉಳಿದಂತೆ ತುರ್ತು, ಅಗತ್ಯ ವೈದ್ಯಕೀಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಹಾಗೂ ಮದುವೆ ಸಮಾರಂಭ, ಅಂತ್ಯಸಂಸ್ಕಾರ, ಚಿತ್ರಮಂದಿರಗಳು ಹೀಗೆ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಮಾರ್ಗ ಸೂಚಿಗಳೇ ಅನ್ವಯವಾಗಲಿದೆ. 

ಹಾಗೂ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಕೂಡಾ ಜಾರಿ ಇರಲಿದ್ದು, ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಅಗತ್ಯ ಚಟುವಟಿಕೆಗಳಿಗೆ ಹೊರತುಪಡಿಸಿ ಜನರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರೋಗಿಗಳು ಮತ್ತು ಅವರೊಂದಿಗೆ ಅವರ ಪರಿಚಾರಕರು ತುರ್ತು ಅಗತ್ಯತೆ ಗಾಗಿ ವ್ಯಕ್ತಿಗಳನ್ನು ಸ್ಥಳಾಂತರಿಸಲು ಜೊತೆಗೆ ತೆರಳಲು ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕೈಗಾರಿಕೆಗಳು ಕಂಪನಿಗಳಿಗೆ ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವವರು ನೌಕರರು ಸಂಸ್ಥೆಯಿಂದ ನೀಡಲಾದ ಸೂಕ್ತ ಗುರುತಿನ ಚೀಟಿ ಅನುಮತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಸಂಚರಿಸಬಹುದಾಗಿದೆ ವೈದ್ಯಕೀಯ ತುರ್ತು ಹಾಗೂ ಔಷಧಾಲಯ ಗಳನ್ನು ಒಳಗೊಂಡ ಅವಶ್ಯಕ ಸೇವೆಗಳು ಎಂದಿನಂತೆ ಯಥಾಸ್ಥಿತಿಯಲ್ಲಿ ಕಾರ್ಯಾಚರಿಸಲಿದೆ ಹಾಗೂ ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!