| ಕೋಝಿಕ್ಕೋಡ್ 8: ಲಂಡನ್ ನಿಂದ ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕೇರಳದ ಮಹಿಳೆಯೋರ್ವರು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಮಹಿಳೆಯು ಏಳು ತಿಂಗಳ ಗರ್ಭಿಣಿಯಾಗಿದ್ದು, ರಾತ್ರಿಯ ಆಹಾರ ಸೇವಿಸಿದ ಬಳಿಕ ಹೆರಿಗೆ ನೋವು ಪ್ರಾರಂಭವಾಗಿತ್ತು. ಕೂಡಲೇ ಸಿಬ್ಬಂದಿ ವಿಮಾನದಲ್ಲಿದ್ದ ಇಬ್ಬರು ವೈದ್ಯರಿಗೆ ಮಾಹಿತಿ ನೀಡಿದರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಕೇರಳದ ನರ್ಸ್ ಗಳು ಕೂಡಾ ಸಹಕರಿಸಿದ್ದು, ಸುಸೂತ್ರವಾಗಿ ಹೆರಿಗೆ ಮಾಡಿಸಲಾಗಿದೆ.
ವಿಮಾನದಲ್ಲಿ ಆಹಾರಗಳನ್ನು ಶೇಖರಿಸಿಡುವ ಜಾಗವನ್ನು ಡೆಲಿವರಿ ಕೊಠಡಿಯಾಗಿ ಮಾರ್ಪಾಡು ಮಾಡಲಾಯಿತು. ವಿಮಾನದಲ್ಲಿದ್ದ ತಲೆದಿಂಬು ಹಾಗೂ ಹಾಸಿಗೆಗಳನ್ನು ಬಳಸಲಾಯಿತು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಡಾಕ್ಟರ್ ಗಳ ಕಿಟ್ ಕೂಡಾ ಸಹಕಾರಿಯಾಯಿತು.
ಮಗು ಮತ್ತು ತಾಯಿ ಆರೋಗ್ಯವಾಗಿದ್ದರೂ ಕೂಡಾ ಚಿಕಿತ್ಸೆ ನೀಡಲೇಬೇಕಾದ ಅವಶ್ಯಕತೆಯಿದ್ದರಿಂದ ಮೂರು ಗಂಟೆಗಳ ಒಳಗಡೆ ಆಸ್ಪತ್ರೆಗೆ ತಲುಪಿಸಬೇಕು ಎಂದು ವೈದ್ಯರು ತಿಳಿಸಿದ್ದ ಕಾರಣ ಪೈಲಟ್ ಗಳು ಮುಖ್ಯಸ್ಥರ ಅನುಮತಿ ಪಡೆದು ೨ ಗಂಟೆ ಕ್ರಮಿಸುವಷ್ಟು ದೂರವಿದ್ದ ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲಾಯಿತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 3.45 ಕ್ಕೆ ಇಳಿಯಬೇಕಾಗಿದ್ದ ವಿಮಾನ ಕೊಚ್ಚಿಯಲ್ಲಿ 9.45ಕ್ಕೆ ಲ್ಯಾಂಡ್ ಆಯಿತು. ಸದ್ಯ ಪತ್ತನಂತಿಟ್ಟ ನಿವಾಸಿ ಮರಿಯಾ ಫಿಲಿಪ್ ಹಾಗೂ ಅವರ ಮಗು ಸದ್ಯ ಫ್ರಾಂಕ್ ಫರ್ಟ್ ನ ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
| |