ದತ್ತಪೀಠದಲ್ಲಿ 365 ದಿನಗಳ ಕಾಲವೂ ಪೂಜೆಗೆ ಸರಕಾರ ಕ್ರಮ- ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ
ಚಿಕ್ಕಮಗಳೂರು, ಅ.8: ದತ್ತಪೀಠದಲ್ಲಿ 365 ದಿನಗಳ ಕಾಲವೂ ಪೂಜೆ ನಡೆಯುವಂತೆ ಸರಕಾರ ಕ್ರಮವಹಿಸಲಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಿನ್ನೆ ಮಾತನಾಡಿದ ಅವರು, ದತ್ತಪೀಠ ನಮ್ಮದೇ, ಅಲ್ಲಿಗೆ ಹಿಂದೂ ಅರ್ಚಕರ ನೇಮಕವನ್ನೂ ಸರಕಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೂರು ಮಂದಿ ನೇತೃತ್ವದ ಸಮಿತಿಯನ್ನು ರಚಿಸಿದೆ. ಆದ್ದರಿಂದ ಆದಷ್ಟು ಬೇಗ ದತ್ತಪೀಠ ನಮ್ಮದಾಗಲಿದೆ. ಅಲ್ಲಿ ಹಿಂದೂ ಅರ್ಚಕರನ್ನು ನೇಮಿಸಿ ಹಿಂದೂಗಳಿಗೆ ವರ್ಷದ 365 ದಿನಗಳ ಕಾಲವೂ ಪೂಜೆಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಈ ವೇಳೆ ಗಂಗೊಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಸಾಮರಸ್ಯ ಕಾಪಾಡೋಡು ನಮ್ಮೆಲ್ಲರ ಕರ್ತವ್ಯ, ಒಂದು ಕೋಮಿನ ಜನರು ಇನ್ನೊಂದು ಕೋಮಿನ ಜನರೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂದು ಫತ್ವಾ ಹೊರಡಿಸುವುದು ದೇಶ ದ್ರೋಹದ ಕೆಲಸವಾಗಿದೆ. ಮುಖ್ಯಮಂತ್ರಿ ಮತ್ತು ರಾಜ್ಯದ ಗೃಹಸಚಿವರು ಈ ಫತ್ವಾ ಸಂಬಂಧ ತಕ್ಷಣ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಮತ್ತೆಲ್ಲೂ ನಡೆಯದಂತೆ ಕ್ರವಹಿಸಬೇಕು. ಕೋಮು ಸೌಹಾರ್ದಕ್ಕೆ ಧಕ್ಕೆ ತರುವುದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಇದೇ ವೇಳೆ,ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೆಸ್ಸೆಸ್ ವಿರುದ್ಧ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿಯವರು ಜವಬ್ದಾರಿಯುತ ಸ್ಥಾನದಲ್ಲಿ ಕೆಲಸ ಮಾಡಿದವರು. ಯಾವುದೇ ಸಂಘಟನೆ ವಿರುದ್ಧ ಹೇಳಿಕೆ ನೀಡುವಾಗ ಪರಿಶೀಲಿಸಿ ಸತ್ಯಾಂಶ ತಿಳಿದುಕೊಂಡು ಪ್ರತಿಕ್ರಿಯಿಸಬೇಕು. ಆರೆಸ್ಸೆಸ್ ದೇಶಭಕ್ತ, ಸಾಂಸ್ಕಂತಿಕ ಸಂಘಟನೆ ಯಾಗಿದೆ. ಈ ಸಂಘಟನೆ ನಿರಂತರವಾಗಿ ಜನರ ಸೇವೆ ಮಾಡಿಕೊಂಡು ಬರುತ್ತಿದೆ. ಆರೆಸ್ಸೆಸ್ ಮೇಲೆ ಯಾವುದೇ ದೇಶದ್ರೋಹದ ಆರೋಪವಿಲ್ಲ, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಹೇಳಿಕೆಯನ್ನು ಹಿಂಪಡೆಯ ಬೇಕೆಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭಗಳಲ್ಲಿ ಇಂತಹ ಷಡ್ಯಂತ್ರ ಮಾಡಲಾಗುತ್ತಿದೆ ಎಂದ ಅವರು, ಉತ್ತರಪ್ರದೇಶದಲ್ಲಿ ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಘಟನೆಯ ಹಿಂದೆ ಸರಕಾರಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತಿ ಷಡ್ಯಂತ್ರ ನಡೆದಿರುವ ಶಂಕೆ ಇದೆ. ಈ ಪ್ರಕರಣ ಸಂಬಂಧ ಸಮಗ್ರ ತನಿಖೆಯಾಗಬೇಕು. ಈ ಕಾರಣಕ್ಕೆ ಅಲ್ಲಿನ ಸರಕಾರ ಉನ್ನತ ಮಟ್ಟದ ತನಿಖೆಗಾಗಿ ಈಗಾಗಲೇ ಸಮಿತಿಯನ್ನು ನೇಮಿಸಲಾಗಿದೆ. ಇಂತಹ ಷಡ್ಯಂತ್ರಗಳಿಗೆಲ್ಲ ನಮ್ಮ ಸರಕಾರ ಅವಕಾಶ ನೀಡುವುದಿಲ್ಲ ಎಂದರು.