ಆಶಾ ಕಾರ್ಯಕರ್ತರಿಗೆ ಸೂಕ್ತ ಸಂಭಾವನೆ ನೀಡಿ: ಅಶೋಕ್ ಕೊಡವೂರು
ಉಡುಪಿ: ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ವಾರ್ಡ್/ಗ್ರಾಮ ಮಟ್ಟದಲ್ಲಿ ಜನರ ನೇರ ಸಂಪರ್ಕದಲ್ಲಿರುವವರು. ಕೋವಿಡ್-೧೯ ಮಹಾಮಾರಿ ಕೊರೋನಾ ವೈರಸ್ ಸೋಂಕು ಯಾರಿಗೆ ತಗುಲಿದೆ ಎಂದು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಸೋಂಕಿತರಿಗೆ ಮುಂದಿನ ಚಿಕಿತ್ಸೆ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವ ಆಶಾ ಕಾರ್ಯಕರ್ತರು ಸೋಂಕು ತಗಲುವ ಆತಂಕ ಹಾಗೂ ಭಯ ಇದ್ದರೂ ಅದನ್ನು ಲೆಕ್ಕಿಸದೆ ತಮ್ಮ ಕಾರ್ಯನಿರ್ವಹಿಸುವ ಜನರ ಆರೋಗ್ಯ ಕಾಪಾಡುವ ನಿಜವಾದ ಆರೋಗ್ಯ ರಾಯಭಾರಿಗಳು.
ಅವರ ನ್ಯಾಯಯುತವಾದ ಬೇಡಿಕೆಯನ್ನು ಸರಕಾರ ಮನ್ನಿಸಿ ಕೊರೋನಾದ ಈ ಸಂಕಷ್ಟದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲಾ ಆಶಾ ಕಾರ್ಯಕರ್ತರಿಗೆ ಸೂಕ್ತ ಭತ್ಯೆಯನ್ನು ನೀಡುವ ಮೂಲಕ ಅವರಿಗೆ ಸೂಕ್ತ ಗೌರವವನ್ನು ನೀಡುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರದ ಜವಾಬ್ದಾರಿ ಹಾಗೂ ಕರ್ತವ್ಯ. ಆದುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಆಗ್ರಹಿಸಿದ್ದಾರೆ.