ಕಳೆದ 6 ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಲಕ್ಷಾಧಿಪತಿಗಳಾಗಿದ್ದಾರೆ: ಪ್ರಧಾನಿ ಮೋದಿ

ಲಖನೌ: ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆದ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನ ‘ಲಕ್ಷಾಧಿಪತಿ’ಗಳಾಗಿದ್ದಾರೆ. ಇದೀಗ ನನ್ನನ್ನು ವಿರೋಧಿಸಲು ವಿರೋಧಿಗಳಿಗೆ ಹೆಚ್ಚು ಕಾರಣ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳನ್ನು ಜರಿದಿದ್ದಾರೆ.

ಪ್ರಧಾನಿ ವಸತಿ ಯೋಜನೆಯಡಿ ಆ ಲಕ್ಷಾಧಿಪತಿಗಳು ಈಗ ಲಕ್ಷಗಟ್ಟಲೆ ಮೌಲ್ಯದ ‘ಪಕ್ಕಾ ಮನೆಗಳನ್ನು’ ಹೊಂದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ಲಖನೌದಲ್ಲಿ ನಗರಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರದ ಅವಧಿಯಲ್ಲಿ ನಗರ ಯೋಜನೆಗಳು ರಾಜಕೀಯದ ಬಲಿಪಶುವಾಗಿದ್ದವು ಎಂದು ಪ್ರತಿಪಾದಿಸಿದರು.

“2017 ಕ್ಕಿಂತ ಮೊದಲು, ಕೇಂದ್ರ ಸರ್ಕಾರ ಉತ್ತರ ಪ್ರದೇಶದಲ್ಲಿ ಬಡವರಿಗಾಗಿ 18,000 ಮನೆಗಳನ್ನು ನಿರ್ಮಿಸಲು ಅನುಮತಿ ನೀಡಿತ್ತು. ಆದರೆ ಅಂದಿನ ರಾಜ್ಯ ಸರ್ಕಾರ 18 ಮನೆ ಸಹ ನಿರ್ಮಿಸಲಿಲ್ಲ. ಆ ಸರ್ಕಾರ ಕಲ್ಯಾಣ ಯೋಜನೆಗಳ ಅನುಷ್ಠಾನ ತಡೆಯುತ್ತಿತ್ತು” ಎಂದು ಮೋದಿ ಆರೋಪಿಸಿದರು.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ ನಗರ ಪ್ರದೇಶದ 75ಸಾವಿರ ಫಲಾನುಭವಿಗಳಿಗೆ ಡಿಜಿಟಲ್‌ ಮೂಲಕ ಮನೆ ಕೀಲಿಗಳನ್ನು ಹಸ್ತಾಂತರಿಸಿ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರಗಳು ಬಡಜನರಿಗೆ ಮನೆ ನಿರ್ಮಿಸುವ ಬಯಕೆ ಹೊಂದಿರಲಿಲ್ಲ. ಮನೆ ಕಟ್ಟಲು ಹಲವು ತೊಡಕುಗಳನ್ನು ಅವರೇ ಹುಟ್ಟುಹಾಕುತ್ತಿದ್ದರು. ಆದರೆ ಇದುವರೆಗೂ ಯೋಗಿ ಆದಿತ್ಯಾನಾಥ್ ಒಂಬತ್ತು ಲಕ್ಷ ಮನೆಗಳನ್ನು ನೀಡಿದ್ದಾರೆ. ಹದಿನಾಲ್ಕು ಲಕ್ಷ ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಇದೀಗ 75 ಜಿಲ್ಲೆಗಳ ಫಲಾನುಭವಿ ಗಳು ಹೊಸ ಮನೆಗಳ ಕೀಲಿಕೈಗಳನ್ನು ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!