ಸಿಎಂ ಮನೆಗೂ ಕಾಲಿಟ್ಟ ಕೊರೊನಾ, ಯಡಿಯೂರಪ್ಪ ಕ್ವಾರಂಟೈನ್!
ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದ ಕೆಲವು ಸಿಬ್ಬಂದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಹೆಚ್ಚುವರಿ ಚಾಲಕರೊಬ್ಬರಿಗೆ ಕೊರೊನಾ ಪಾಸಿಟವ್ ಆಗಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ಅನುಸಾರ ದ್ವಿತೀಯ ಸಂಪರ್ಕಿತರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇನ್ನು ಕೆಲವು ದಿನಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ. ಸೋಮವಾರ ಅಧಿಕಾರಿಗಳ ಜತೆಗೆ ವಿಡಿಯೊ ಸಂವಾದ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ದೃಢಪಡಿಸಿವೆ.
ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು, ನೆಗೆಟಿವ್ ಬಂದಿತ್ತು. ಸೋಮವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.
ಮೂಲಗಳ ಪ್ರಕಾರ ಮುಖ್ಯಮಂತ್ರಿ ಗೃಹ ಕಚೇರಿಯ ದೂರವಾಣಿ ಆಪರೇಟರ್, ಇಬ್ಬರು ಎಸ್ಕಾರ್ಟ್, ಅಡುಗೆಯವರು ಮತ್ತು ಕಾರು ಚಾಲಕನಿಗೆ ಪಾಸಿಟಿವ್ ಆಗಿದೆ. ಸುಮಾರು 10 ಜನರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ, ಕಾವೇರಿ ನಿವಾಸಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
‘ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಹಾಗು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿ ಡ್ ನಿಯಂತ್ರಣಕ್ಕೆ ಸಹಕರಿಸಿ’ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.