ಚಾರ್ಮಾಡಿ ಘಾಟ್: ರಾತ್ರಿ ಸಂಚಾರ ನಿಷೇಧ, ಚಿಕ್ಕಮಗಳೂರು ಡಿಸಿ ಆದೇಶ
ಚಿಕ್ಕಮಗಳೂರು: ಕಳೆದ ವರ್ಷ ಭಾರಿ ಮಳೆಯ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿಯಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆಗಾಗ್ಗೆ ಭೂಕುಸಿತ ಸಂಭವಿಸುತ್ತಿದ್ದು ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದ್ದರೂ, ಈ ವರ್ಷವೂ ಭೂಕುಸಿತ ಸಂಭವಿಸುವ ಭೀತಿ ತಪ್ಪಿಲ್ಲ. ಈ ಕುರಿತಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಗೌತಮ್ ಬಗಾಡಿ ಕಳೆದ ರಾತ್ರಿಯಿಂದ ಚಾರ್ಮಾಡಿ ಘಾಟ್ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿ ಆದೇಶಿಸಿದ್ದಾರೆ.
ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಮತ್ತು ಜುಲೈ 9 ಮತ್ತು ಜುಲೈ 10 ರಂದು ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಚಾರ್ಮಾಡಿ ಘಾಟ್ ರಸ್ತೆಯ ಭೂಕುಸಿತ ಸಂಬಂಧ ಮಾರ್ಗದಲ್ಲಿನ ಬೃಹತ್ ಮರಗಳ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದಾರೆ.
ಈ ಹಿನ್ನೆಲೆ ಮಂಗಳೂರು – ತುಮಕೂರು ಎನ್ಎಚ್ 73 ಚಾರ್ಮಡಿ ಘಾಟ್ ರಸ್ತೆಯನ್ನು ಚಿಕ್ಕಮಗಳೂರು ಜಿಲ್ಲಾ ಗಡಿಯಿಂದ ಕೊಟ್ಟಿಗೆಹಾರದವರೆಗೆ ಪ್ರತಿದಿನ ರಾತ್ರಿ 7 ರಿಂದ ಮರುದಿನ ಬೆಳಿಗ್ಗೆ 7 ರವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಮುಂದಿನ ಆದೇಶ ಬರುವವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ.