ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ, ನಿರ್ಧಾರ ಯಾರು ತೆಗೆದುಕೊಳ್ಳುತ್ತಿದ್ದರೋ- ಕಾಂಗ್ರೆಸ್’ನ ಕಪಿಲ್ ಸಿಬಲ್
ನವದೆಹಲಿ: ಪಂಜಾಬ್ನಲ್ಲಿ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ‘ಪಕ್ಷ ತೊರೆದಿರುವವರು ಮರಳಿ ಬರಬೇಕು ಹಾಗೂ ದೇಶದ ಪ್ರತಿ ಕಾಂಗ್ರೆಸಿಗ ಪಕ್ಷದ ಬಲವರ್ಧನೆಯ ಬಗೆಗೆ ಯೋಚಿಸಬೇಕು. ಕಾಂಗ್ರೆಸ್ ಮಾತ್ರವೇ ಈ ಗಣರಾಜ್ಯವನ್ನು ಉಳಿಸಲು ಸಾಧ್ಯ’ ಎಂದಿದ್ದಾರೆ.
’ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ, ಹಾಗಾಗಿ ಈ ಎಲ್ಲ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ. ನಮಗೆ ಅದು ತಿಳಿದಿರುವುದಾದರೂ, ತಿಳಿಯದಂತಾಗಿದೆ’ ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
‘ನಾವು (ಜಿ–23ರ ಮುಖಂಡರು) ಪಕ್ಷ ತೊರೆದು, ಬೇರೆ ಎಲ್ಲಿಗೋ ಹೋಗುವವರಲ್ಲ. ಯಾರು ಪಕ್ಷದ ನಾಯಕತ್ವಕ್ಕೆ ಹತ್ತಿರದಲ್ಲಿದ್ದರೋ ಅವರು ಪಕ್ಷ ತೊರೆದರು, ವಿಪರ್ಯಾಸವೆಂದರೆ ಯಾರನ್ನು ಅವರು (ಪಕ್ಷದ ನಾಯಕತ್ವ) ಹತ್ತಿರದವರು ಎಂದು ಭಾವಿಸಲಿಲ್ಲವೋ ಅವರಿನ್ನೂ ಜೊತೆಗೆ ನಿಂತಿದ್ದಾರೆ’ ಎಂದು ಪಕ್ಷದೊಳಗಿನ ಸ್ಥಿತಿಯನ್ನು ಕಪಿಲ್ ಸಿಬಲ್ ಹೊರಹಾಕಿದ್ದಾರೆ.
ಪಂಜಾಬ್ನಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಆತಂಕ ವ್ಯಕ್ತಪಡಿಸಿರುವ ಕಪಿಲ್ ಸಿಬಲ್, ‘ದೇಶದ ಗಡಿ ರಾಜ್ಯದಲ್ಲಿ (ಪಂಜಾಬ್) ಕಾಂಗ್ರೆಸ್ ಪಕ್ಷಕ್ಕೆ ಇಂಥ ಸ್ಥಿತಿ ಎದುರಾಗಿದೆ ಎಂದರೆ ಏನರ್ಥ? ಇದು ಐಎಸ್ಐ ಮತ್ತು ಪಾಕಿಸ್ತಾನಕ್ಕೆ ಅನುಕೂಲಕರ ಆಗಬಹುದಾಗಿದೆ. ನಮಗೆಲ್ಲ ಪಂಜಾಬ್ನ ಇತಿಹಾಸ ತಿಳಿದಿದೆ ಹಾಗೂ ಅಲ್ಲಿ ಉಂಟಾದ ತೀವ್ರವಾದದ ಬಗೆಗೂ…’ ಎಂದಿದ್ದಾರೆ.
ಪಕ್ಷದ ವರಿಷ್ಠರಿಗೆ ಕಳೆದ ವರ್ಷ ಆಗಸ್ಟ್ನಲ್ಲಿ ಪತ್ರ ಬರೆದು ಕ್ರಮಗಳಿಗಾಗಿ ಕಾಯುತ್ತಿರುವ ಮುಖಂಡರ ಪರವಾಗಿ ಕಪಿಲ್ ಸಿಬಲ್ ಮಾತನಾಡಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿ ವಿಚಾರಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಪಕ್ಷದ ಸ್ಥಿತಿಯ ಬಗ್ಗೆ ಚರ್ಚಿಸಲು ಕೂಡಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸುವಂತೆ ನನ್ನ ಹಿರಿಯ ಸಹೋದ್ಯೋಗಿ ಒಬ್ಬರು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿರಬಹುದು ಅಥವಾ ಬರೆಯುತ್ತಿರಬಹುದು ಎಂದಿದ್ದಾರೆ.