ಬ್ರಹ್ಮಾವರ: ವಿದ್ಯುತ್ ತಂತಿ ತಗುಲಿ, ಕೃಷಿಕ ಸ್ಥಳದಲ್ಲೇ ಸಾವು
ಬ್ರಹ್ಮಾವರ: ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಕೃಷಿಕನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಕೃಷಿಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಸಾಧು (72) ಎಂಬವರು ಮೃತ ಕೃಷಿಕ ಎಂದು ತಿಳಿದು ಬಂದಿದೆ. ಬ್ರಹ್ಮಾವರ ಬಳಿಯ ಚೇರ್ಕಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಾಧು ಅವರು ಕೆಲಸ ಮಾಡುತ್ತಿದ್ದ ಗದ್ದೆಯ ಮೇಲಿಂದ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಭಾರೀ ಗಾಳಿ ಮಳೆಯ ಪರಿಣಾಮ ತಂತಿಗಳು ದುರ್ಬಲವಾಗಿದ್ದರಿಂದ ,ಅದು ತುಂಡಾಗಿ ಬಿದ್ದಿದೆ.
ದುರಾದೃಷ್ಟವಶತ್ ಅದೇ ಸಂಧರ್ಭದಲ್ಲಿ ತಂತಿಯ ಕೆಳಗಡೆ ಸಾಧು ಕೆಲಸ ಮಾಡಿಕೊಂಡಿದ್ದು, ತಂತಿ ಕೃಷಿಕನ ಮೇಲೆ ಬಿದ್ದ ಪರಿಣಾಮ ಕೃಷಿಕ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.