ಬೆಂಗಳೂರು: 80 ಮಕ್ಕಳ ಮತಾಂತರ ಆರೋಪ – ದೂರು ದಾಖಲು

ಬೆಂಗಳೂರು: ಮತಾಂತರ ತಡೆಯಲು ರಾಜ್ಯದಲ್ಲಿ ಬಲವಾದ ಕಾಯ್ದೆ ತರುವ ಚಿಂತನೆಯಲ್ಲಿ ಸರ್ಕಾರವಿರುವ ಬೆನ್ನಲ್ಲೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಸುಮಾರು 80 ಮಕ್ಕಳಿಂದ ಕ್ರೈಸ್ತ ಧರ್ಮಕ್ಕೆ ಸೇರಿದ್ದ ಪ್ರಾರ್ಥನೆ ಮಾಡಿಸಿ ಮಕ್ಕಳನ್ನು ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಲಾಗುತ್ತಿದೆ ಎಂದು ಸಂಘಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬ್ಯಾಡರಹಳ್ಳಿಯಲ್ಲಿ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಮನೆಯಲ್ಲಿ ಸುಮಾರು 70 ರಿಂದ 80 ಮಕ್ಕಳಿಂದ ಕ್ರೈಸ್ತ ಪ್ರಾರ್ಥನೆ ಮಾಡಿಸಲಾಗಿದೆಂಬ ವಿಡಿಯೋ ಕಳೆದ ಭಾನುವಾರ ವೈರಲ್ ಆಗಿತ್ತು.

ಆರ್​ಎಸ್​ಎಸ್ ಕಾರ್ಯಕರ್ತರಿಂದ ಮಾಹಿತಿ ಪಡೆದ ಬ್ಯಾಡರಹಳ್ಳಿ ಪೊಲೀಸರು, ನಾರಾಯಣಸ್ವಾಮಿ ಮನೆಗೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಕಳೆದ ಹತ್ತು ವರ್ಷದಿಂದ ಆ ಮನೆಯಲ್ಲಿ ಕೇವಲ ಪ್ರಾರ್ಥನೆ ಮಾಡಿದ್ದಾರಷ್ಟೇ. ಆದರೆ ಮತಾಂತರ ಮಾಡಿಲ್ಲವೆಂಬುದು ತನಿಖೆ ವೇಳೆ ಕಂಡುಬಂದಿದೆ ಎನ್ನಲಾಗಿದೆ.ಸದ್ಯ ಕೊವಿಡ್ ನಿಯಮ ಉಲ್ಲಂಘಿಸಿ ಪ್ರಾರ್ಥನೆ ಹಿನ್ನೆಲೆ ನಾರಾಯಣ ಸ್ವಾಮಿ ವಿರುದ್ಧ ಎನ್​ಡಿಎಮ್​ಎ ಪ್ರಕರಣ ದಾಖಲಾಗಿದೆ.

ಪ್ರಾರ್ಥನ ಮಂದಿರದ ಮೇಲೆ‌ ಕ್ರಮಕ್ಕೆ ಈಗಾಗಲೇ ಬಿಬಿಎಂಪಿಗೆ ಮಾಹಿತಿ ನೀಡಿದ್ದು ಪ್ರಾರ್ಥನೆ ನಡೆಸುತ್ತಿದ್ದ ಮನೆ ಮಾಲೀಕ ನಾರಾಯಣ ಸ್ವಾಮಿಗೆ ನೋಟಿಸ್ ಜಾರಿಯಾಗಿದೆ. ಇತ್ತ ಹಾಸನ ಜಿಲ್ಲೆಯ ಹಾಸನ ನಗರ ಮಹಾರಾಜಾ ಉದ್ಯಾನವನದಲ್ಲಿ ರಾಧಮ್ಮ ಎಂಬ ಮಹಿಳೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆಂಬ ಆರೋಪದಡಿ ಸಾರ್ವಜನಿಕರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಬಗ್ಗೆ ವರದಿಯಾಗಿದೆ.

ಆರೋಪಿತ ಮಹಿಳೆ ಪ್ರತಿದಿನ ಉದ್ಯಾನವನಕ್ಕೆ ಆಗಮಿಸಿ ಅಲ್ಲಿಗೆ ಬರುತ್ತಿದ್ದ ಸ್ಥಳೀಯರನ್ನು ಮತಾಂತರವಾಗುವಂತೆ ಪುಸಲಾಯಿಸುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಈ ವಿಷಯ ಇಂದು ಸ್ಥಳೀಯರ ಮೂಲಕ ಹಿಂದೂಪರ ಸಂಘಟನೆಗಳಿಗೆ ತಿಳಿದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆಯ ಬಳಿ ಇದ್ದ ಮತಾಂತರಕ್ಕೆ ಬಳಸುವ ಪುಸ್ತಕಗಳು ಮತ್ತು ಕರ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!