ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ದಿಢೀರ್ ರಾಜಿನಾಮೆ!
ಚಂಡೀಗಢ: ಪಂಜಾಬ್ ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಂಧು ದಿಢೀರ್ ರಾಜಿನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ಸಿಧು ಅವರು ಪಕ್ಷದ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಕಳೆದ ಜುಲೈನಲ್ಲಿ ಸಿಧು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜಿಗಳಿಂದಲೇ ಮನುಷ್ಯನ ಪಾತ್ರದ ಕುಸಿತವಾಗುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ ಎಂದು ಸಿಧು ಪತ್ರದಲ್ಲಿ ಬರೆದಿದ್ದಾರೆ.
ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನವನ್ನು ತೊರೆಯಲು ಸಿದ್ದು ಅವರನ್ನು ಪ್ರೇರೇಪಿಸಿದ್ದು ಏನು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ನವಜೋತ್ ಸಿಂಗ್ ಸಿಧು ರಾಜಿನಾಮೆ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನಾನು ನಿನಗೆ ಹೇಳಿದ್ದೆ. ಆತ ಸ್ಥಿರ ಮನುಷ್ಯನಲ್ಲ. ಅಲ್ಲದೆ ಪಂಜಾಬ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸರಿ ಹೊಂದುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.