‘ದಿ ನ್ಯೂಯಾರ್ಕ್ ಟೈಮ್ಸ್’ ಪ್ರಕಟಿಸಿದ ಪ್ರಧಾನಿ ಮೋದಿ ಕುರಿತಾದ ವರದಿ ನಕಲಿ- ದಿ ಪ್ರಿಂಟ್
ಹೊಸದಿಲ್ಲಿ, ಸೆ.28: ಅಮೆರಿಕದ ಪ್ರತಿಷ್ಠಿತ ದಿನಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ ಎನ್ನಲಾದ ಪ್ರಧಾನಿ ನರೇಂದ್ರ ಮೋದಿ ಯವರ ಕುರಿತಾದ “ಮೋದಿ ಭೂಮಿಯ ಕೊನೆ ಭರವಸೆಯೆಂದು ಬಣ್ಣಿಸುವ” ವರದಿ ನಕಲಿ ಎಂದು ಸುದ್ದಿಜಾಲತಾಣ ದಿ ಪ್ರಿಂಟ್ ವರದಿ ಮಾಡಿದೆ.
ಸೆ.24-25ರಂದು ಮೋದಿಯರ ಅಮೆರಿಕ ಭೇಟಿಯನ್ನು ಪ್ರಸ್ತಾಪಿಸಿರುವ ಪ್ರಕಟಿತ ಸಿದ್ದಿ ಮಾದರಿ ಹೋಲುವ ಸ್ಕ್ರೀನ್ ಶಾಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸ್ಕ್ರೀನ್ ಶಾಟ್ ನಲ್ಲಿ “ಜಗತ್ತಿನ ಅತ್ಯಂತ ಪ್ರೀತಿಪಾತ್ರ ಹಾಗೂ ಅತ್ಯಂತ ಬಲಿಷ್ಠ ನಾಯಕ ನಮ್ಮನ್ನು ಆಶೀರ್ವದಿಸಲು ಇಲ್ಲಿಗೆ ಬಂದಿದ್ದಾರೆ” ಎಂಬ ಟ್ಯಾಗ್ಲೈನನ್ನು ಕೂಡಾ ಅದರಲ್ಲಿ ಬರೆಯಲಾಗಿದೆ. ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಛಾಯಾಚಿತ್ರದೊಂದಿಗೆ “ಲಾಸ್ಟ್, ಬೆಸ್ಟ್ ಹೋಪ್ ಆನ್ ಆರ್ತ್ (ಭೂಮಿಯಲ್ಲಿನ ಕೊನೆಯ, ಅತ್ಯುತ್ತಮ ಭರವಸೆ) ಎಂಬ ಶೀರ್ಷಿಕೆಯನ್ನು ಈ ಸ್ಕ್ರೀನ್ಶಾಟ್ನಲ್ಲಿ ತೋರಿಸಲಾಗಿದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಸ್ಕ್ರೀನ್ ಶಾಟ್ ನ್ಯೂಯಾರ್ಕ್ ಟೈಮ್ಸ್ ನ ಮುಖಪುಟವಲ್ಲವೆಂದೂ, ವಾಸ್ತವವಾಗಿ ಸೆ. 26ರ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ ಮೋದಿ ಬಗ್ಗೆ ಯಾವುದೇ ವರದಿಯು ಪ್ರಕಟವಾಗಿಲ್ಲ ವೆಂದು ಸುದ್ದಿಜಾಲತಾಣ ದಿ ಪ್ರಿಂಟ್. ಇನ್ ಹೇಳಿದೆ. ಅಲ್ಲದೆ ಈ ಪತ್ರಿಕೆಯ ಪುಟವನ್ನು ಲಿಂಕ್ ಮಾಡುವಂತಹ ಯುಆರ್ ಎಲ್ ಅನ್ನು ಕೂಡಾ ಯಾವುದೇ ಜಾಲತಾಣದಲ್ಲಿ ನೀಡಲಾಗಿಲ್ಲ ಎಂದೂ ತಿಳಿಸಿದೆ. ಇದರೊಂದಿಗೆ ಈ ಸ್ಕ್ರೀನ್ ಶಾಟ್ ಅನ್ನು ನಿಕಟವಾಗಿ ಪರಿಶೀಲಿಸಿದಲ್ಲಿ, ಅದು ತಿರುಚಿಲ್ಪಟ್ಟ ಚಿತ್ರವೆಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಈ ಸ್ಕ್ರೀನ್ ಶಾಟ್ ನಲ್ಲಿ ಸೆಪ್ಟೆಂಬರ್ ಪದದ ಸ್ಪೆಲ್ಲಿಂಗ್ ಅನ್ನೂ ತಪ್ಪಾಗಿ ಬರೆಯಲಾಗಿದೆ. ಕಳೆದ ತಿಂಗಳು ಝೀ ನ್ಯೂಸ್ ಸುದ್ದಿ ವಾಹಿನಿ ಪ್ರಕಟಿಸಿದ ವರದಿಯೊಂದರಲ್ಲಿ ಪ್ರಕಟವಾದ ಮೋದಿಯವರ ಛಾಯಾಚಿತ್ರವನ್ನು ಈ ನಕಲಿ ಮುಖಪುಟದಲ್ಲಿ ಬಳಸಲಾಗಿರುವುದು ಕೂಡಾ ಬೆಳಕಿಗೆ ಬಂದಿದೆ ಎಂದು ಈ ಸುದ್ದಿಜಾಲತಾಣ ವರದಿಯಲ್ಲಿ ತಿಳಿಸಿದೆ.
ಇನ್ನು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದ ಈ ಸ್ಕ್ರೀನ್ಶಾಟ್ ಅನ್ನು 76 ಸಾವಿರಕ್ಕೂ ಅಧಿಕ ಫಾಲೋ ವರ್ಗಳನ್ನು ಹೊಂದಿರವ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೋಹಿತ್ ಚಾಹಲ್ ಮರು ಟ್ವೀಟ್ ಮಾಡಿದ್ದರು.