ಸಾವಿನಲ್ಲೂ ಒಂದಾಗುವ ಮೂಲಕ 25 ವರ್ಷಗಳ ಸ್ನೇಹಕ್ಕೆ ಸಾರ್ಥಕತೆ ತಂದ ಸುಂದರಿ ಹಾಗೂ ಬೇಬಿ ಪೂಜಾರ್ತಿ

ಉಡುಪಿ ಸೆ.21(ಉಡುಪಿ ಟೈಮ್ಸ್ ವರದಿ) ಸ್ನೇಹ ಎಂಬ ಒಂದು ಪದಕ್ಕೆ ಸಾವಿರ ನಂಟು ಇದೆ. ಪ್ರಪಂಚದಲ್ಲಿ ಅತ್ಯಂತ ಸುಂದರವಾದ ಸಂಬಂಧ ಅಂದರೆ ಅದು ರಕ್ತ ಸಂಬಂಧಗಳನ್ನು ಮೀರಿಸುವ ಸ್ನೇಹ ಸಂಬಂಧ. ರಕ್ತ ಹಂಚಿಕೊಂಡು ಹುಟ್ಟದ, ಬೆಲೆ ಕಟ್ಟಲಾಗದ ಆಸ್ತಿಯೇ ಸ್ನೇಹ ಸಂಬಂಧ.

ಗೆಳೆತನ ಎನ್ನುವುದೇ ಹಾಗೇ ಅಲ್ವಾ..? ಹಣ, ಆಸ್ತಿ, ಆಂತಸ್ತು, ಧರ್ಮ, ಜಾತಿ ಎನ್ನುವ ಹಂಗು ಇಲ್ಲದೆ ಹುಟ್ಟುವ ಬಾಂಧವ್ಯವೇ ಈ ಸ್ನೇಹ. ಇಂತಹ ಮಧುರವಾದ ಬಾಂದವ್ಯಕ್ಕೆ ಅರ್ಥಕಲ್ಪಿಸಿಕೊಟ್ಟಿದ್ದಾರೆ ಕಟಪಾಡಿಯ ಇಬ್ಬರು ಸ್ನೇಹಿತೆಯರು. ಸಾವಿನಲ್ಲೂ ಒಂದಾಗುವ ಮೂಲಕ 25 ವರ್ಷಗಳ ಸ್ನೇಹಕ್ಕೆ ಸಾರ್ಥಕತೆ ತಂದುಕೊಟ್ಟಿದ್ದಾರೆ ಇವರು.

ಸುಂದರಿ ಪೂಜಾರ್ತಿ ಹಾಗೂ ಬೇಬಿ ಪೂಜಾರ್ತಿ ಸಾವಿನಲ್ಲೂ ಒಂದಾದ ಅಪರೂರದ ಸ್ನೇಹಿತೆಯರು. ಇವರು ಉದ್ಯಾವರದ ಬಿಲ್ಲವರ ಮಹಾಜನ ಸಂಘದಲ್ಲಿ ಹಲವಾರು ವರ್ಷಗಳಿಂದ ಪರಿಚಾರಕಿಯರಾಗಿ ಸೇವೆಸಲ್ಲಿಸುತ್ತಿದ್ದರು. ಇವರಿಬ್ಬರ ಮೃದು ಹಾಗೂ ಸರಳ ಸ್ವಭಾವವೇ ಇವರ ಗೆಳೆತನ ಗಟ್ಟಿಯಾಗಲು ಸ್ಪೂರ್ತಿ ಅಯಿತೇನೋ ಎನ್ನಬಹುದು. ಯಾಕೆಂದರೆ ಇವರಿಬ್ಬರದ್ದು ಮೃದು ಸ್ವಭಾವ, ಸರಳ ವ್ಯಕ್ತಿತ್ವ ಯಾರೊಂದಿಗೂ ಏರು ಧ್ವನಿಯಲ್ಲಿ ಮಾತನಾಡಿದವರಲ್ಲ.

ಸಂಘದಲ್ಲಿ ಪರಿಚಾರಕಿಯರಾಗಿ ಸುಂದರಿ ಪೂಜಾರ್ತಿ ಅವರು 35 ವರ್ಷ ಸೇವೆ ಸಲ್ಲಿಸಿದರೆ, ಬೇಬಿ ಪೂಜಾರ್ತಿ ಅವರು 25 ವರ್ಷ ಸೇವೆ ಸಲ್ಲಿಸಿದ್ದಾರೆ. ಇಬ್ಬರ ಗೆಳೆತ ಆರಂಭ ಆದಾಗಿನಿಂದ ಪರಿಚಾರಕಿಯರಾಗಿ ತಮ್ಮ ವ್ಯಾಪ್ತಿಗೆ ಬರುವ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಒಟ್ಟಿಗೆ ಪಾಲ್ಗೊಳ್ಳುತ್ತಿದ್ದರು. ಪೂಜೆ, ಮದುವೆ ಇತರ ಯಾವುದೇ ಕಾರ್ಯಕ್ರಮಗಳಿಗೆ ಸಂಬಂದಿಸಿ ಪರಿಕರಗಳ ಪೂರೈಕೆ, ಸ್ವಚ್ಚತೆ ಸೇರಿದಂತೆ ಇತರೆ ಕೆಲಸಗಳನ್ನು ಹೊಂದಾಣಿಕೆಯಿಂದ ಸೇರಿಕೊಂಡು ಒಟ್ಟಿಗೆ ಮಾಡುತ್ತಿದ್ದರು. ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದ ಇವರ ಕಾರ್ಯ ವಿಧಾನ ಮತ್ತು ಆಪ್ತಸ್ನೇಹಿತರಾಗಿದ್ದ ಇವರ ಸ್ನೇಹ ಸಂಘದಲ್ಲಿ ಇದ್ದ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು.

ಇತ್ತೀಚೆಗೆ ಈ ಇಬ್ಬರೂ ಸ್ನೇಹಿತೆಯರ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೇ ಸೂರಿನಡಿಯಲ್ಲಿ ಬದುಕು ಕಟ್ಟಿಕೊಂಡ ಅವರು ಒಂದೇ ದಿನ ಅಂದರೆ ಸೆ.20 ರಂದು ಒಟ್ಟಿಗೆ ಇಹಲೋಕ ತ್ಯಜಿಸಿದ್ದಾರೆ. ಬೇಬಿ ಪೂಜಾರ್ತಿ ಅವರು ಬೆಳಿಗ್ಗೆ ನಿಧನ ಹೊಂದಿದರೆ, ಸುಂದರಿ ಪೂಜಾರ್ತಿ ಅವರು ಸಂಜೆ ವೇಳೆ ನಿಧನ ಹೊಂದಿದ್ದಾರೆ. ಇವರಿಬ್ಬರಿಬ ಅಂತ್ಯಕ್ರಿಯೆಯನ್ನು ಕೂಡಾ ಉದ್ಯಾವರದ ರುಧ್ರಭೂಮಿಯಲ್ಲಿ ಒಂದೇ ದಿನ ನೆರವೇರಿಸಲಾಯಿತು. ಈ ಮೂಲಕ ಇವರಿಬ್ಬರೂ ಸಾವಿನ ನಂತರವೂ ತಮ್ಮ ಸ್ನೇಹವನ್ನು ಅಮರವನ್ನಾಗಿದ್ದಾರೆ.

ಇನ್ನು ಉದ್ಯಾವರ ನಿವಾಸಿ ದಿ. ಸುಂದರಿ ಪೂಜಾರ್ತಿ ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಾಗೂ ಉದ್ಯಾವರ ಸಾರ್ವಜನಿಕ ರುದ್ರಭೂಮಿಯ ನಿರ್ವಾಹಕ ಕುಟ್ಟಿ ಪೂಜಾರಿ ಅವರ ಪತ್ನಿ ದಿ. ಬೇಬಿ ಪೂಜಾರ್ತಿ ಅವರು ಪತಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಗಲಿಕೆಯನ್ನು ಇವರ ಆಪ್ತ ವಲಯದಲ್ಲಿಯೂ ಸ್ನೇಹಿತರಿಬ್ಬರೂ ಸಾವಿನಲ್ಲೂ ಒಂದಾಗುವ ಮೂಲಕ ಸಾರ್ಥಕತೆ ಮೆರೆದ್ದಾರೆ ಎಂದೇ ಹೇಳುತ್ತಾರೆ.  

Leave a Reply

Your email address will not be published. Required fields are marked *

error: Content is protected !!