ಉಡುಪಿ: 35 ಕ್ಕೂ ಅಧಿಕ ಎಸ್’ಡಿಪಿಐ ಕಾರ್ಯಕರ್ತರ ಮೇಲೆ ಕೇಸ್- ಕಾನೂನು ಹೋರಾಟ ಭಾಸ್ಕರ್ ಪ್ರಸಾದ್

ಉಡುಪಿ ಸೆ.21(ಉಡುಪಿ ಟೈಮ್ಸ್ ವರದಿ): ದೆಹಲಿಯಲ್ಲಿ ನಡೆದಿರುವ ಸಿವಿಲ್ ಡಿಫೆನ್ಸ್ ಮಹಿಳಾ ಪೊಲೀಸ್ ಅಧಿಕಾರಿಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಉಡುಪಿಯ ಎಸ್‍ಡಿಪಿಐ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಪೊಲಿಸರು ಪ್ರಕರಣ ದಾಖಲಿಸಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಉಡುಪಿ ಜಿಲ್ಲಾ ಎಸ್‍ಡಿಪಿಐ ತಿಳಿಸಿದೆ.

ಈ ಬಗ್ಗೆ ಎಸ್‍ಡಿಪಿಐ ರಾಜ್ಯ ಕಾರ್ಯಕಾರಿಣಿ ಸದಸ್ಯ ಭಾಸ್ಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ನಡೆದ ಸಿವಿಲ್ ಡಿಫೆನ್ಸ್ ಮಹಿಳಾ ಪೊಲೀಸ್ ಅಧಿಕಾರಿ ಸಾಬೀಯಾ ಸೈಫಿಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಯನ್ನು ಖಂಡಿಸಿ ಹಾಗೂ ಹತ್ಯೆಯ ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿ ಸೆ.14 ರಂದು ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ ಶಾಂತಿಯುತ ಪ್ರತಿಭಟನೆ ಮತ್ತು ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯ ಸಲುವಾಗಿ ಪೂರ್ವಾನುಮತಿಗಾಗಿ ಹಾಗೂ ಧ್ವನಿರ್ವಧಕದ ಬಳಕೆಯ ಅನುಮತಿಗಾಗಿ ಉಡುಪಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿದ್ದೇವೆ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಭೇಟಿ ನೀಡಿ ಈ ಕುರಿತು ಡಿವೈಎಸ್‍ಪಿಯವರೊಂದಿಗೆ ಚರ್ಚಿಸಿ, ಅವರು 50 ರಿಂದ 100 ಮಂದಿ ಸೇರಿ ಪ್ರತಿಭಟನೆ ನಡೆಸಲು ಮೌಖಿಕ ಅನುಮತಿ ನೀಡಿದ್ದು ಅದರಂತೆ ಕಾರ್ಯಕ್ರಮವನ್ನು ಆಯೋಜಿಸಿದ್ದೆವು.

ಎಲ್ಲಾ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಂತಿಯುತವಾದ ಪ್ರತಿಭಟನೆಯನ್ನು ನಡೆಸಿದ್ದು, ಬೋರ್ಡ್ ಶಾಲೆ ಯಿಂದ ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕದ ತನಕ ಶಾಂತಿಯುತ ಜಾಥ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಂಚಾರ ವ್ಯವಸ್ಥೆಯಲ್ಲಯಾಗಲಿ, ಸಾರ್ವಜನಿಕರಿಗೆ, ಅಂಗಡಿ ಮಾಲಕರಿಗಾಗಲಿ ಯಾವುದೇ ತೊಂದರೆಯಾಗಿರುವುದಿಲ್ಲ. ಆದರೆ ಪ್ರತಿಭಟನೆ ಮುಗಿದ ಬಳಿಕ ನಗರ ಠಾಣೆಯ ಎಸ್ಐ ಮತ್ತು ವೃತ್ತ ನಿರೀಕ್ಷಕರ ಆದೇಶದ ಮೇರೆಗೆ ಹಲವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ರಾತ್ರಿ ಸುಮಾರು 12 ಗಂಟೆ ತನಕ ಕಾಯಿಸಿ ಕೇಸು ದಾಖಲಿಸಿ ಬಿಟ್ಟಿರುತ್ತಾರೆ. ಅಲ್ಲದೇ ಈ ಪ್ರತಿಭಟನಾ ಸಭೆಗೆ ಅತಿಥಿ ಗಳಾಗಿ ಭಾಗವಹಿಸಿದವರು ಹಾಗೂ ಮಹಿಳಾ ಅತಿಥಿಗಳ ವಿರುದ್ಧವೂ ಪ್ರಕರಣ ದಾಖಲಿಸಿರುತ್ತಾರೆ. ಕಾರ್ಯಕ್ರಮಕ್ಕೆ ಆಗಮಿಸಿದವರ ವಾಹನಗಳನ್ನು ವಶಪಡಿಸಿಕೊಂಡು ದಂಡವಿಧಿಸುವ ಮೂಲಕ ತಾರತಮ್ಯ ಮಾಡಿದ್ದಾರೆ.ಈ ಮೊದಲು ಕೋವೀಡ್ ಸಂದರ್ಭ ದಲ್ಲಿ ಧಾರ್ಮಿಕ ಹಾಗೂ ಕೆಲವು ಸಂಘಟನೆಗಳ ಕಾರ್ಯಕ್ರಮಗಳು ನಡೆದಿರುತ್ತವೆ. ಆ ಸಂದರ್ಭ ದಲ್ಲಿ ಯಾವುದೇ ಕೇಸು ದಾಖಲಿಸದ ಪೊಲೀಸ್ ಇಲಾಖೆ ಈಗ 35 ಕ್ಕೂ ಅಧಿಕ ಮಂದಿಯ ಮೇಲೆ ಸೆಕ್ಷನ್ 107, 109 ಮತ್ತು 112 ನ ಕೇಸು ಹಾಕಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ.

ಈ ಅತ್ಯಾಚಾರ ಪ್ರಕರಣ ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವಂತಹ ಹೀನಾಯ ಕೃತ್ಯವಾಗಿದ್ದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಖಂಡಿಸುತ್ತಾನೆ. ಆದ್ರೆ ಉಡುಪಿಯ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ವೃತ್ತ ನೀರಿಕ್ಷಕರು, ಯಾರ ಒತ್ತಡಕ್ಕೆ ಮಣಿದು ಕಾರ್ಯಕ್ರಮ ಆಯೋಜಕರ ಮೇಲೆ ಕೇಸ್ ದಾಖಲಿಸಿದ್ದಾರೆ..? ಸಂವಿಧಾನ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೇ ಆದ್ದರಿಂದ ಪ್ರತಿಭಟಿಸುವ ಹಕ್ಕನ್ನು ಕಸಿಯುವ ಮೂಲಕ ಜಿಲ್ಲೆಯಲ್ಲಿ ಎಸ್‍ಡಿಪಿಐ ಧಮನಿಸುವ ಹಾಗೂ ದ್ವೇಷದದ ವಾತಾವರಣವನ್ನು ಸೃಷ್ಟಿಸಲು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಮುಂದಾಗಿರುವನ್ನು ಎಸ್‍ಡಿಪಿಐ ಖಂಡಿಸುತ್ತದೆ. ಅಲ್ಲದೇ ಇಂತಹ ಪ್ರತಿಭಟಿಸುವ ಹಕ್ಕನ್ನು ಕಸಿಯುತ್ತಿರುವ ಪೊಲೀಸ್ ಇಲಾಖೆಯ ವಿರುದ್ಧ ಕಾನೂನು ಹೋರಾಟಕ್ಕೆ ಎಸ್‍ಡಿಪಿಐ ಬದ್ಧವಾಗಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!