ಕಡಿಯಾಳಿ ದೇವಸ್ಥಾನದ ಕಾಷ್ಠಶಿಲ್ಪ 3 ಜಿಲ್ಲೆಗೆ ಪ್ರಥಮ- ಕೆ.ರಘುಪತಿ ಭಟ್
ಉಡುಪಿ: ಜೀರ್ಣೋದ್ಧಾರಗೊಳ್ಳುತ್ತಿರುವ ಉಡುಪಿ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ರವಿವಾರ ನಡೆದ ಮರದ ಕೆತ್ತನೆ ಕೆಲಸದ ಮುಹೂರ್ತದಲ್ಲಿ ಶಾಸಕರು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ ಉಡುಪಿ, ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳು ವೈಭವಯುತವಾಗಿ ಜೀರ್ಣೋದ್ಧಾರಗೊಂಡಿದೆ. ಆದರೆ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಸುತ್ತುಪೌಳಿಯ ಕೆಂಪುಕಲ್ಲು ಗೋಡೆ ಕೆತ್ತನೆ ಕೆಲಸ ಮತ್ತು ಅದರ ನಡುವೆ ಕಪ್ಪುಕಲ್ಲಿನ ಆಧಾರ ಸ್ತಂಭಗಳು ಮತ್ತು ಕಪ್ಪುಕಲ್ಲಿನ ಕಿಟಕಿಗಳು ಈ ರೀತಿ ವಿಶಿಷ್ಟವಾಗಿ, ಅತ್ಯಂತ ಸುಂದರವಾಗಿ ದೇವಾಲಯ ನಿರ್ಮಾಣವಾಗುತ್ತಿರುವುದು ಈ ಮೂರು ಜಿಲ್ಲೆಗಳಲ್ಲಿ ಪ್ರಥಮ ಎಂದು ಹೇಳಿದರು.
ದೇವಸ್ಥಾನದ ಸುತ್ತುಪೌಳಿ ಮತ್ತು ಸುಬ್ರಹ್ಮಣ್ಯ ಗುಡಿಯ ತಳಪಾಯ ತನಕ ಕೆಲಸವನ್ನು ಗ್ರಾಮಸ್ಥರೇ ಸೇರಿ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಜೆರ್ರಿ ವಿನ್ಸೆಂಟ್ ಡಯಾಸ್, ಮಾತನಾಡಿ ಸಮಗ್ರ ಅಭಿವೃದ್ಧಿಗೊಳ್ಳುತ್ತಿರುವ ಶ್ರೀ ದೇವಾಲಯಕ್ಕೆ ತಮ್ಮ ಸಂಸ್ಥೆಯಿಂದ ದೊಡ್ಡ ಕೊಡುಗೆ ನೀಡುವುದಾಗಿ ಹೇಳಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ರವಿರಾಜ್ ಆಚಾರ್ಯ, ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿಗಳಾದ ಸುಭಾಷ್ ಹೆಗ್ಡೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಣೇಶ ರಾವ್, ಪ್ರಧಾನ ಅರ್ಚಕರಾದ ದುರ್ಗಾ ಪ್ರಸಾದ್ ಉಪಾಧ್ಯ, ದೇವಸ್ಥಾನದ ಪವಿತ್ರ ಪಾಣಿ ಕುಂಜಿತ್ತಾಯ ಶ್ರೀನಿವಾಸ್ ಉಪಾಧ್ಯ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಳದ ಸಹಾಯಕ ಅರ್ಚಕ ಸುರೇಶ್ ಆಚಾರ್ಯರ ಮಗ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಸಿ.ಎಸ್ ಅಭಿಜಿತ್ ಆಚಾರ್ಯ ಇವರಿಗೆ ಸನ್ಮಾನ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ನಾಗೇಶ್ ಹೆಗ್ಡೆ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಮತ್ತು ಉಡುಪಿಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ, ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಶಾಮಸುಂದರ್ ವಂದಿಸಿದರು .ಕಡಿಯಾಳಿ ಮಾತೃ ಮಂಡಳಿಯಿಂದ ದೇವರ ಸ್ತೋತ್ರಗಳು ಭಜನಾ ಕಾರ್ಯಕ್ರಮ ನಡೆಯಿತು.