ಆಹಾರ ಕಲಬೆರಕೆ, ವಿವಿಧ ಮಾಲಿನ್ಯ, ವ್ಯಾಯಾಮವಿಲ್ಲದ ಜೀವನದಿಂದ ಕ್ಯಾನ್ಸರ್ ಬರಬಹುದು- ಡಾ. ವಾಸುದೇವ ಭಟ್
ಉಡುಪಿ ಸೆ.21: ಕ್ಯಾನ್ಸರ್ ಎನ್ನುವುದು ಎಲ್ಲರನ್ನು ಆತಂಕಕ್ಕೀಡು ಮಾಡುತ್ತದೆ. ಅದರಲ್ಲೂ ಮಕ್ಕಳಿಗೆ ಕಂಡು ಬರುವ ಕ್ಯಾನ್ಸರ್ ಪೋಷಕರನ್ನು ಮತ್ತಷ್ಟು ಕುಗ್ಗಿಸುತ್ತದೆ. ಆದರೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್ ಗುಣಪಡಿಸಲು ಸಾಧ್ಯ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ಮಕ್ಕಳ ರಕ್ತಶಾಸ್ತ್ರ ಮತ್ತು ಅಂಕೋಲಜಿ ವಿಭಾಗದ ಕ್ಯಾನ್ಸರ್ ತಜ್ಞ ಡಾ. ವಾಸುದೇವ ಭಟ್ ಹೇಳಿದ್ದಾರೆ.
ಕ್ಯಾನ್ಸರ್ ಮಾಸಾಚರಣೆ ಅಂಗವಾಗಿ ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ಆಯೋಜಿಸಲಾದ ಮಕ್ಕಳ ಕ್ಯಾನ್ಸರ್ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಕ್ಯಾನ್ಸರಿಗೂ ದೊಡ್ಡವರ ಕ್ಯಾನ್ಸರಿಗೂ ಸಾಕಷ್ಟು ವ್ಯತ್ಯಾಸ ಗಳಿವೆ. ದೊಡ್ಡವರಲ್ಲಿ ಕಂಡುಬರುವ ಅನೇಕ ವಿಧದ ಕ್ಯಾನ್ಸರ್ ಗಳು ಚಿಕ್ಕವರಲ್ಲಿ ಕಂಡುಬರುವುದಿಲ್ಲ. ಹಾಗೂ ದೊಡ್ಡವರಿಗಿಂತ ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಗುಣಮುಖರಾಗುವ ಪ್ರಮಾಣ ಶೇ. 80 ರಿಂದ 90 ರಷ್ಟಿದೆ. ಆದ್ದರಿಂದ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‍ನ್ನು ಗುಣಪಡಿಸಲು ಸಾಧ್ಯ ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 60 ಸಾವಿರ ಮಕ್ಕಳಲ್ಲಿ ಕ್ಯಾನ್ಸರ್ ಕಂಡುಬರುತ್ತಿದೆ. ಮಕ್ಕಳ ಕ್ಯಾನ್ಸರ್ ಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲವಾದರೂ ವಿವಿಧ ರೀತಿಯ ಮಾಲಿನ್ಯ, ಆಹಾರ ಕಲಬೆರಕೆ, ವ್ಯಾಯಾಮವಿಲ್ಲದ ಜೀವನ ಇತ್ಯಾದಿ ವಿವಿಧ ಕಾರಣ ಗಳಿಂದ ಕ್ಯಾನ್ಸರ್ ಬರಬಹುದು. ಕ್ಯಾನ್ಸರ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಆನುವಂಶಿಕವಾಗಿಯೂ ಹೆತ್ತವರಿಂದ ಮಕ್ಕಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 5ಕ್ಕಿಂತ ಕಡಿಮೆ ಇದೆ. ಆದರೆ, ಕ್ಯಾನ್ಸರ್ ಅದರಲ್ಲೂ ಮಕ್ಕಳ ಕ್ಯಾನ್ಸರ್ ಕುರಿತ ತಿಳಿವಳಿಕೆ ಕೊರತೆ, ಭೀತಿ, ಮುಜುಗರ ಇತ್ಯಾದಿಗಳಿಂದ ರೋಗ ಉಲ್ಬಣಗೊಳ್ಳುವ ಅಥವಾ ಸಾವು ಸಂಭವಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳನ್ನು ಮಕ್ಕಳ ಕ್ಯಾನ್ಸರ್ ಮಾಹಿತಿ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಶೀಘ್ರ ಪತ್ತೆ, ವಿಳಂಬ ರಹಿತ ಚಿಕಿತ್ಸೆ ನೀಡಿದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳು ಖಂಡಿತ ಗುಣಮುಖರಾಗಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕ್ಯಾನ್ಸರ್ ಮುಕ್ತರಾಗಿ ಉಪಯುಕ್ತ, ಉತ್ಪಾದಕ ಬದುಕು ಮುನ್ನಡೆಸಬೇಕು ಎಂದ ಅವರು, ದೊಡ್ಡವರಿಗೆ ಇತರ ಕಾಯಿಲೆಗಳಿಂದಾಗಿ ಅಡ್ಡ ಪರಿಣಾಮ ಹೆಚ್ಚಿದ್ದರೆ, ಮಕ್ಕಳಲ್ಲಿ ಅದು ವಿರಳ.ಕಿಮೋಥೆರಪಿ,ರೇಡಿಯೋ ಥೆರಪಿ, ಸರ್ಜರಿ ಬಳಿಕ ಪೌಷ್ಠಿಕ ಆಹಾರ, ನಿರಂತರ ಔಷಧಿ, 6 ತಿಂಗಳಿಂದ 2- 6 ವರ್ಷಗಳ ಕಾಲ ಚಿಕಿತ್ಸೆಯ ಅಗತ್ಯವಿದೆ. 2ರಿಂದ 25 ಲಕ್ಷ ರೂ.ವರೆಗೂ ಚಿಕಿತ್ಸೆ ವೆಚ್ಚ ಬರಲಿದೆ. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು, ಸರಕಾರದ ಯೋಜನೆಗಳು ಪೂರಕವಾಗಬಲ್ಲದು.ಮಕ್ಕಳಲ್ಲಿ ಜೀವನೋತ್ಸಾಹ ತುಂಬಿಸುವಲ್ಲಿ ಮತ್ತು ಪಾಲಕರಲ್ಲಿ ಧೈರ್ಯ ತುಂಬುವಲ್ಲಿ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ನಿರ್ದೇಶಕ ಹಾಗೂ ಖ್ಯಾತ ಮನೋಚಿಕಿತ್ಸಕ ಡಾ.ಪಿ.ವಿ. ಭಂಡಾರಿ ಮತ್ತು ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ರೋಟರ್ಯಾಕ್ಟ್ ಸಂಸ್ಥೆಯ ರೇಷ್ಮಾ ಮತ್ತು ಶ್ರವಣ್ ಬಾಸ್ರಿ ಉಪಸ್ಥಿತರಿದ್ದರು.