ಪ್ರಮೋದ್ ಮಧ್ವರಾಜ್ ಫಿಶ್‌ಮೀಲ್ ವಿರುದ್ಧ ಸುಳ್ಳು ದೂರು- ಮಾಜಿ ನಗರ ಸಭಾ ಸದಸ್ಯನಿಗೆ 10 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪಾಲುದಾರರಾಗಿರುವ ರಾಜ್ ಫಿಶ್‌ಮೀಲ್ ಮತ್ತು ಆಯಿಲ್ ಕಂಪೆನಿಯು ಕೊಳೆತ ಮೀನುಗಳು ಮತ್ತು ತ್ಯಾಜ್ಯವನ್ನು ನದಿಗೆ ಹರಿಯಬಿಡುವ ಮೂಲಕ ಪರಿಸರಕ್ಕೆ ಹಾನಿ ಮಾಡುವ ಚಟುವಟಿಕೆಯಲ್ಲಿ ತೊಡಗಿದೆ. ಈ ಸಂಸ್ಥೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೋರಿ ಮಾಜಿ ನಗರ ಸಭಾ ಸದಸ್ಯ ಪ್ರಶಾಂತ್ ಅಮಿನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾ ಮಾಡಿದೆ. ಅಲ್ಲದೇ, 10 ಲಕ್ಷ ರೂಪಾಯಿ ದಂಡವನ್ನು ಕೋವಿಡ್‌ನಿಂದ ಸಂಕಷ್ಟ ಎದುರಿಸುತ್ತಿರುವ ವಕೀಲರ ಗುಮಾಸ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಒಂದು ತಿಂಗಳ ಒಳಗಾಗಿ ಜಮೆ ಮಾಡುವಂತೆ ಅರ್ಜಿದಾರರಿಗೆ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರ ಪ್ರಶಾಂತ್ ಅಮಿನ್ ಅವರು ವೈಯಕ್ತಿಕ ಹಿತಾದೃಷ್ಟಿಯಿಂದ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದೆ.
ಅರ್ಜಿದಾರ ಪ್ರಶಾಂತ್ ಅಮಿನ್ ಅವರು ರಾಜ್ ಫಿಶ್‌ಮೀಲ್ ಮತ್ತು ಆಯಿಲ್ ಕಂಪೆನಿ ಜೊತೆ ವ್ಯವಹಾರ ಹೊಂದಿದ್ದು, ಕಂಪೆನಿಗೆ ಅರ್ಜಿದಾರರು ಮೀನು ಪೂರೈಕೆ ಮಾಡುತ್ತಿದ್ದರು. 2013-14 ಮತ್ತು 2020-21ರ ಅವಧಿಯಲ್ಲಿ ಕಂಪೆನಿಯು ಅರ್ಜಿದಾರರಿಗೆ 95 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಆಗಿಂದಾಗ್ಗೆ ಪಾವತಿ ಮಾಡಿದೆ. ಕಂಪೆನಿ ಮತ್ತು ಅರ್ಜಿದಾರರ ನಡುವೆ ಒಪ್ಪಂದ ಮುರಿದ ಬಿದ್ದಾಗ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದು, ಇರದಲ್ಲಿ ಕಂಪೆನಿಯು ಸಾವನ್ನಪ್ಪಿದ ಮೀನು ಮತ್ತು ತ್ಯಾಜ್ಯವನ್ನು ನದಿಗೆ ಹರಿಯ ಬಿಟ್ಟು ನೀರು ಕಲುಷಿತಗೊಳಿಸುವುದರ ಜೊತೆಗೆ ಪರಿಸರಕ್ಕೆ ಹಾನಿ ಉಂಟು ಮಾಡಿದೆ ಎಂದು ದೂರಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಸರಣಾ ವರದಿ ಸಲ್ಲಿಸಿದ್ದು, ಕಂಪೆನಿಯ ಬಗ್ಗೆ ಯಾವುದೇ ಆಪಾದನೆ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿತು.
ಕಂಪೆನಿಯ ಜೊತೆ ವ್ಯವಹಾರ ಹೊಂದಿದ್ದರೂ ವಾಸ್ತವಿಕ ಅಂಶಗಳನ್ನು ಬಚ್ಚಿಟ್ಟು ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದಾರೆ. ಇದರಿಂದ ಇದು ಪಿಐಎಲ್ ಅಲ್ಲ, ಬದಲಿಗೆ ವೈಯಕ್ತಿಕ ಹಿತಾಸಕ್ತಿ ಅರ್ಜಿ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಅರ್ಜಿದಾರರು ನ್ಯಾಯಾಲಯದ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ. ಹೀಗಾಗಿ, ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಉದ್ಯಮಿಯಾಗಿರುವ ಅರ್ಜಿದಾರ ಅಮಿನ್ ಅವರು ಒಂದು ತಿಂಗಳ ಒಳಗಾಗಿ 10 ಲಕ್ಷ ರೂಪಾಯಿ ದಂಡದ ಮೊತ್ತವನ್ನು ಪಾವತಿ ಮಾಡಬೇಕು. ಇಲ್ಲವಾದರೆ ಉಡುಪಿ ಜಿಲ್ಲಾಧಿಕಾರಿಯು ಅರ್ಜಿದಾರರಿಂದ ದಂಡ ವಸೂಲಿ ಮಾಡಿ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಜಮೆ ಮಾಡಬೇಕು. ಈ ಸಂಬಂಧ ಅನುಸರಣಾ ವರದಿಯನ್ನು ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸಬೇಕು. ಈ ಮೂಲಕ ಪಿಐಎಲ್ ಅನ್ನು ವಜಾ ಮಾಡಲಾಗಿದೆ ಎಂದು ಪೀಠ ಆದೇಶ ಮಾಡಿದೆ.
ರಾಜ್ ಫಿಶ್‌ಮೀಲ್ ಮತ್ತು ಆಯಿಲ್ ಕಂಪೆನಿಯನ್ನು ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಪ್ರತಿನಿಧಿಸಿದ್ದರು. ಅರ್ಜಿದಾರ ಪ್ರಶಾಂತ್ ಅಮಿನ್ ಪರ ದಿಲ್‌ರಾಜ್ ಜೂಡ್ ರೋಹಿತ್ ಸೀಕ್ವೈರಾ ವಾದಿಸಿದರು.