ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರಲಿದ್ದಾರೆ-ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಬೆಂಗಳೂರು ಸೆ.20 : ಬಿಜೆಪಿ ಸಚಿವ, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು “ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರಲಿದ್ದಾರೆ ಅವರು ಯಾರೆಂಬುದು ಕೆಲ ದಿನಗಳಲ್ಲೇ ಗೊತ್ತಾಗುತ್ತೆ “ಎನ್ನುವ ಮೂಲಕ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನಮ್ಮ ಯಾವ ಶಾಸಕರು ಕೂಡ ಪಕ್ಷ ಬಿಟ್ಟು ಹೋಗಲ್ಲ, ಬಿಜೆಪಿ ಶಾಸಕರನ್ನು ಡಿ.ಕೆ.ಶಿವಕುಮಾರ್ ಸೆಳೆಯುವುದರಲ್ಲಿ ಅರ್ಥವಿಲ್ಲ, ನಮ್ಮ ಯಾವ ಶಾಸಕರೂ ಕಾಂಗ್ರೆಸ್ ಗೆ ಹೋಗಲ್ಲ. ಬಿಜೆಪಿ ಶಾಸಕರನ್ನು ಕಾಂಗ್ರೆಸ್ ನತ್ತ ಸೆಳೆಯುವ ಡಿಕೆಶಿ ಯತ್ನ ವಿಫಲವಾಗಲಿದೆ. ಬದಲಾಗಿ ಕಾಂಗ್ರೆಸ್ ಶಾಸಕರೇ ನಮ್ಮ ಜೊತೆ ಬರಲಿದ್ದಾರೆ. ಅವರು ಯಾರು ಎಂದು ಕೆಲದಿನಗಳಲ್ಲೇ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ನಿನ್ನೆ ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಕೆಲ ಶಾಸಕರನ್ನು ಸಂಪರ್ಕಿಸಿ, ಕಾಂಗ್ರೆಸ್ ನತ್ತ ಸೆಳೆಯಲು ಯತ್ನಿಸಿ ಎಂಬ ಬಗ್ಗೆ ನನಗೆ ಮಾಹಿತಿ ಬಂದಿದೆ. ನಮ್ಮ ಯಾವೊಬ್ಬ ಶಾಸಕರು ಕಾಂಗ್ರೆಸ್ ನತ್ತ ಮುಖಮಾಡಲ್ಲ. ಅನಗತ್ಯವಾಗಿ ಡಿಕೆಶಿ ಪ್ರಯತ್ನಿಸುವುದು ಬೇಡ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಆಪರೇಷನ್ ಹಸ್ತ ಆರಂಭಿಸಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿತ್ತು. ಈ ನಡುವೆ ಇದೀಗ ಬಿಎಸ್‍ವೈ ಅವರು, ಕಾಂಗ್ರೆಸ್ ನ ಕೆಲ ಶಾಸಕರೇ ಬಿಜೆಪಿಗೆ ಬರಲಿದ್ದಾರೆ ಎಂದು ಹೇಳಿರುವುದು ರಾಜಕಿಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ